ರೈಲಿನಲ್ಲಿ ಮೊಬೈಲ್ ಕಳವು, ಯುಪಿಐ ಮೂಲಕ ಹಣ ವರ್ಗಾವಣೆ: ಆರೋಪಿ ಬಂಧನ

ಉಡುಪಿ: ರೈಲಿನಲ್ಲಿ ಪ್ರಯಾಣಿಕರ ಮೊಬೈಲ್ ಕಳವು ಮಾಡಿ, ಅದರ ಮೂಲಕ ಯುಪಿಐ ಬಳಸಿ ಹಣ ವರ್ಗಾವಣೆ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈತ ವಿವಿಧ ಪೊಲೀಸ್ ಠಾಣೆಗಳ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಆ.2ರಂದು ರುಬೆನ್ ಫೆರ್ನಾಂಡಿಸ್ ಎಂಬುವರು ಮಂಗಳೂರಿನಿಂದ ಮಡಗಾಂವ್‌ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಬೆಳಗಿನ ಜಾವ ಸುಮಾರು 2 ಗಂಟೆಗೆ ಬೈಂದೂರು ರೈಲು ನಿಲ್ದಾಣದ ಸಮೀಪ ಅವರ ಬಳಿಯಿದ್ದ ₹17 ಸಾವಿರ ಮೌಲ್ಯದ ಮೊಟೊರೊಲಾ ಜಿ54 5ಜಿ ಮೊಬೈಲ್‌ನ್ನು ಅಪರಿಚಿತ ವ್ಯಕ್ತಿಯೊಬ್ಬ ಕಳವು ಮಾಡಿದ್ದ. ಬಳಿಕ ಆ ಮೊಬೈಲ್ ಮೂಲಕ ಯುಪಿಐ ಬಳಸಿ ₹19,847 ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ಅವರು ಸಾಸ್ತಾನದ ಐರೋಡಿ ಗ್ರಾಮದ ಗೋಳಿಬೆಟ್ಟು ನಿವಾಸಿ ಪ್ರಹ್ಲಾದ್ (32) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಕಳವು ಮಾಡಿದ್ದ ಮೊಟೊರೊಲಾ ಜಿ54 5ಜಿ, ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ಹಾಗೂ ಐಕ್ಯೂ ಝಡ್9 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆ ವೇಳೆ ಆರೋಪಿ, ಜೋಶಿ ನಾರಾಯಣ ನಾಯಕ್ ಎಂಬಾತನೊಂದಿಗೆ ಸೇರಿ ಆ.2ರಂದು ಬೈಂದೂರು ಸಮೀಪ ರೈಲಿನಲ್ಲಿ ಪ್ರಯಾಣಿಕರ ಸ್ಯಾಮ್‌ಸಂಗ್ ಎಂ34 ಮೊಬೈಲ್ ಹಾಗೂ ಅ.13ರಂದು ಐಫೋನ್ 16 ಪ್ರೊ ಮ್ಯಾಕ್ಸ್ ಮೊಬೈಲ್ ಕಳವು ಮಾಡಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ, ಮಾ.6ರಂದು ಬೈಂದೂರು ಸಮೀಪದ ರೈಲಿನಲ್ಲಿ ಪ್ರಯಾಣಿಕರ ಐಕ್ಯೂ ಝಡ್9 ಮೊಬೈಲ್ ಕಳವು ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಕಾರವಾರ ಗ್ರಾಮೀಣ, ಬಂಟ್ವಾಳ ನಗರ, ಉಡುಪಿ ನಗರ, ಬ್ರಹ್ಮಾವರ, ಕೋಟ ಹಾಗೂ ಕುಂದಾಪುರ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿರುವ ಕಳವು ಮತ್ತು ದರೋಡೆ ಪ್ರಕರಣಗಳಲ್ಲಿಯೂ ಆರೋಪಿ ಭಾಗಿಯಾಗಿರುವುದು ತಿಳಿದುಬಂದಿದೆ.

ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಕಾರವಾರ ಗ್ರಾಮೀಣ, ಬಂಟ್ವಾಳ ನಗರ, ಉಡುಪಿ ನಗರ, ಬ್ರಹ್ಮಾವರ, ಕೋಟ ಹಾಗೂ ಕುಂದಾಪುರ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿರುವ ಕಳವು ಮತ್ತು ದರೋಡೆ ಪ್ರಕರಣಗಳಲ್ಲಿಯೂ ಆರೋಪಿ ಭಾಗಿಯಾಗಿರುವುದು ತಿಳಿದುಬಂದಿದೆ.

ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಬೈಂದೂರು ಠಾಣೆಯ ಉಪನಿರೀಕ್ಷಕರಾದ ಸುನಿಲ್ ಕುಮಾರ್ ಬಿ.ವೈ., ಮಹೇಶ್ ಪೂಜೇರಿ ಹಾಗೂ ಸಿಬ್ಬಂದಿಗಳಾದ ಜಯರಾಮ, ಚಿದಾನಂದ ಮತ್ತು ಮಾಲಪ್ಪ ದೇಸಾಯಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆರೋಪಿಯನ್ನು ಕಾನೂನುಬದ್ಧವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.