ಫೆಬ್ರವರಿಯೊಳಗೆ ವಾರಾಹಿ ಕಾಮಗಾರಿ ಪೂರ್ಣಗೊಳಿಸಿ: ಯಶ್ ಪಾಲ್ ಸುವರ್ಣ

ಉಡುಪಿ: ನಗರಕ್ಕೆ ಕುಡಿಯುವ ನೀರು ಪೂರೈಸುವ ವಾರಾಹಿ ಯೋಜನೆ ಕಾಮಗಾರಿ ಫೆಬ್ರವರಿಯೊಳಗೆ ಪೂರ್ಣಗೊಳಿಸಲು ಶಾಸಕ ಯಶ್​ಪಾಲ್​ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರದಂದು ನಗರಸಭೆ ಸತ್ಯಮೂರ್ತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿಳಂಬಗತಿಯ ಕಾಮಗಾರಿ ಸಹಿಸುವುದಿಲ್ಲ, ಕಾಮಗಾರಿ ಮುಗಿಸಿ ನೀರು ಪೂರೈಸಬೇಕು ಎಂದು ತಾಕೀತು ಮಾಡಿದರು.

ಕೆಯುಡಿಐಎಫ್​ಸಿ ಎಇಇ ಅರಕೇಶ್​ ಮಾಹಿತಿನೀಡಿ, ಪ್ರಸ್ತುತ ಒಟ್ಟು 38 ಕಿ. ಮೀ. ಮುಖ್ಯ ಪೈಪ್​ಲೈನ್​ ಸಂಪರ್ಕದಲ್ಲಿ 31 ಕಿ. ಮೀ. ಪೈಪ್​ಲೈನ್​ ಪೂರ್ಣಗೊಳಿಸಲಾಗಿದೆ. ಹಾಲಾಡಿ ಮತ್ತು ಭರತ್​ಕಲ್​ ಡಬ್ಲೂಟಿಪಿ ಪ್ಲಾಂಟ್​ವರೆಗೆ 7 ಕಿ. ಮೀ. ಪೈಪ್​ ಲೈನ್​ ಹಾಕಲು ಸ್ಥಳಿಯರು ಮತ್ತು ಅರಣ್ಯ ಇಲಾಖೆಯಿಂದ ಸಮಸ್ಯೆಯಾಗಿದೆ. ಅರಣ್ಯ ಇಲಾಖೆ ಸಂಬಂಧಿಸಿದ ಪ್ರಕ್ರಿಯೆ ಅಂತಿಮದಲ್ಲಿದ್ದು, ಇದಕ್ಕೆ ಪರಿಹಾರ ಸಿಗಲಿದೆ. ಉಡುಪಿಗೆ ಹಾದು ಬರುವ ಮುಖ್ಯ ಪೈಪ್​ಲೈನ್​ಗೆ 5 ಸೇತುವೆ ನಿರ್ಮಾಣವಾಗಬೇಕು. ಇದರಲ್ಲಿ 2 ಪೂರ್ಣಗೊಂಡಿದ್ದು, ಒಂದು ಸೇತುವೆ ಕೆಲಸ ಪ್ರಗತಿಯಲ್ಲಿದೆ. ತಾತ್ಕಾಲಿಕ ಪೈಪ್​ಲೈನ್​ ನಿರ್ಮಿಸಿ ನಗರಕ್ಕೆ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.

ನಗರಸಭೆ ವತಿಯಿಂದ ಸರಳೇಬೆಟ್ಟುವಿನಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಛಯದ ಮನೆಗಳನ್ನು ಡಿ.1ರೊಳಗೆ ಫಲಾನುಭವಿಗಳಿಗೆ ಹಸ್ತಾಂತರಿಸಲು ಶಾಸಕ ಯಶ್ಪಾಲ್​ ಸುವರ್ಣ ಸೂಚಿಸಿದರು. ವಿದ್ಯುತ್​ ಸಂಬಂಧಿತ ಕಾಮಗಾರಿ ಪೂರ್ಣಗೊಂಡ ತಕ್ಷಣ ಮನೆ ಹಸ್ತಾಂತರಿಸಲಾಗುವುದು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ತಿಳಿಸಿದರು. ವಸತಿ ಸಮುಚ್ಛಯಕ್ಕೆ ಸಂಬಂಧಿಸಿದ ಕಂಪ್ಲೀಶನ್​ ರಿಪೋರ್ಟ್​ ನೀಡಿದ ಕೂಡಲೆ ವಿದ್ಯುತ್​ ಸಂಪರ್ಕ ನೀಡಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.

ಮಣಿಪಾಲ, ಉಡುಪಿ ಪೇಟೆಯಲ್ಲಿ ಪಾರ್ಕಿಂಗ್​ ಮತ್ತು ಟ್ರಾಫಿಕ್​ ದಟ್ಟಣೆ ಸಮಸ್ಯೆ ತೀವ್ರವಾಗಿದ್ದು, ಅಡ್ಡಾದಿಡ್ಡಿ ಪಾರ್ಕಿಂಗ್​, ಏಕಮುಖ ಸಂಚಾರದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನಗರದಲ್ಲಿ ಸುಗಮ ಸಂಚಾರಕ್ಕೆ ಕ್ರಮವಹಿಸಬೇಕು ಎಂದು ಸಂಚಾರ ಪೊಲೀಸರಿಗೆ ಸೂಚಿಸಿದರು.

ನಗರಸಭೆ ಕಚೇರಿಯಲ್ಲಿ ಕಾಲ್​ಸೆಂಟರ್​ ರೂಪಿಸಿ ಎಲ್ಲ ದೂರುಗಳನ್ನು ದಾಖಲೀಕರಣ ಮಾಡಿಕೊಂಡು ವಾರದ ಒಳಗೆ ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪೌರಾಯುಕ್ತ ರಾಯಪ್ಪ ಉಪಸ್ಥಿತರಿದ್ದರು.