ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ಪ್ರಕರಣ: ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡುವವರೆಗೆ ಸುಮ್ಮನಿರುವುದಿಲ್ಲ ಎಂದ ಯಶ್ ಪಾಲ್ ಸುವರ್ಣ

ಉಡುಪಿ: ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿನಿಯರು ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಮೂಲಕ ಮತ್ತೊಬ್ಬ ವಿದ್ಯಾರ್ಥಿನಿಯನ್ನು ವಿಡೀಯೋ ಚಿತ್ರೀಕರಿಸಿರುವ ಘಟನೆ ಬಗ್ಗೆ ವರದಿಯಾಗಿದ್ದು, ಇದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.

ವರದಿಗಳ ಪ್ರಕಾರ ಮೂವರು ವಿದ್ಯಾರ್ಥಿನಿಯರು ತಮ್ಮ ಸಹವರ್ತಿ ವಿದ್ಯಾರ್ಥಿನಿಗಳು ಶೌಚಾಲಯಗಳನ್ನು ಬಳಸುವುದನ್ನು ರೆಕಾರ್ಡ್ ಮಾಡಲು ಮಹಿಳಾ ವಾಶ್ ರೂಂಗಳಲ್ಲಿ ವೀಡಿಯೋ ಕ್ಯಾಮೆರಾಗಳನ್ನು ಇರಿಸಿದ್ದರು ಎನ್ನಲಾಗಿದ್ದು ಈ ಸಂಬಂಧ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ.

ಘಟನೆ ಸಂಬಂಧ ಉಡುಪಿ ಎಸ್ಪಿ ಅಕ್ಷಯ್ ಹಾಕೆ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋಗಳು ಸುಳ್ಳು ಮಾಹಿತಿಯಿಂದ ಕೂಡಿದ್ದು, ಘಟನೆಗೆ ಸಂಬಂಧಪಟ್ಟಿರುವ ವೀಡಿಯೋಗಳಾಗಿರುವುದಿಲ್ಲ. ಸುಳ್ಳು ಮಾಹಿತಿ ಹಂಚಿಕೊಳ್ಳುವುದರಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ವಿದ್ಯಾರ್ಥಿನಿಯರ ಮೊಬೈಲ್ ನಲ್ಲಿ ವೀಡಿಯೋ ಸಿಕ್ಕಿಲ್ಲ ಎಂದು ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪ್ರತಿಕ್ರಿಯಿಸಿದ್ದು, “ಇದು ಉಡುಪಿ – ಪೊಡವಿಗೊಡೆಯ ಶ್ರೀ ಕೃಷ್ಣನ ಊರು – ಹಿಂದುತ್ವದ ಭದ್ರಕೋಟೆ. ಯಾರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರನ್ನು ಬಿಡಲು ಸಾಧ್ಯವೇ ಇಲ್ಲ. ಉಡುಪಿ‌ಯ ನೇತ್ರ ಜ್ಯೋತಿ ಶಿಕ್ಷಣ ಸಂಸ್ಥೆಯ ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋಗಳನ್ನು ಕಳ್ಳತನದಿಂದ ಚಿತ್ರೀಕರಿಸಿ ಸಮಾಜಘಾತುಕ ಶಕ್ತಿಗಳ ಕೈಯಲ್ಲಿ ಕೊಟ್ಟು ಅವರ ಜೀವನವನ್ನು ಹಾಳು ಮಾಡುವ ಪ್ರಯತ್ನದಲ್ಲಿ ಭಾಗಿಯಾದ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಸರಕಾರ ಕೈ ತೊಳೆದುಕೊಳ್ಳುವ ಕೆಲಸ ಮಾಡುತ್ತಿದೆ. ಹೀಗಾಗಲು ಯಾವುದೇ ಕಾರಣಕ್ಕೆ ಬಿಡುವುದಿಲ್ಲ. ತಪ್ಪಿತಸ್ಥರನ್ನು ಕಾನೂನಿನ ಕಟಕಟೆಗೆ ತಂದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವವರೆಗೆ ಸುಮ್ಮನಿರುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

Image

“ಹಾಗೆಯೇ, ಈ ಪ್ರಕರಣದ ಬಗ್ಗೆ ಧ್ವನಿಯೆತ್ತಿದ ರಶ್ಮಿ ಸಾಮಂತ್ ಅವರಿಗೆ ಪೊಲೀಸ್ ಇಲಾಖೆ ಕೊಟ್ಟ ಕಿರುಕುಳದ ಬಗ್ಗೆ ಸಂಬಂಧಪಟ್ಟವರಿಂದ ವರದಿ ಕೇಳಿದ್ದೇನೆ. ಯಾವುದೇ ಕಾರಣಕ್ಕೂ ರಶ್ಮಿ ಅವರಿಗೆ ಅಥವಾ ಅವರ ಕುಟುಂಬಕ್ಕೆ ತೊಂದರೆ ಕೊಡಬಾರದು, ಕೊಟ್ಟರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದೇನೆ. ರಶ್ಮಿಯವರ ಮನೆಗೆ ತೆರಳಿ (ರಶ್ಮಿಯವರು ಹೊರರಾಜ್ಯದಲ್ಲಿದ್ದಾರೆ) ಅವರ ಮಾತೃಶ್ರಿಯವರನ್ನು ಭೇಟಿಮಾಡಿ ಯಾವುದೇ ಕಾರಣಕ್ಕೂ ಹೆದರಬಾರದು ನಾವೆಲ್ಲಾ ನಿಮ್ಮ ಜೊತೆಗಿದ್ದೇವೆ ಎಂದು ಧೈರ್ಯ ಹೇಳಿ ಬಂದಿದ್ದೇನೆ” ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.