ಉಡುಪಿ ನೂತನ ಜಿಲ್ಲಾಸ್ಪತ್ರೆ ಕಾಮಗಾರಿಗೆ ಬಾಕಿ ಅನುದಾನವನ್ನು ತಕ್ಷಣ ಮಂಜೂರು ಮಾಡಿ ಜನವರಿ 15 ರೊಳಗೆ ಜಿಲ್ಲೆಯ ಜನತೆಯ ಆರೋಗ್ಯ ಸೇವೆಗೆ ಲೋಕಾರ್ಪಣೆ ಮಾಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿಯ ಪ್ರಗತಿ ಹಾಗೂ ಬಾಕಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.
ಈಗಾಗಲೇ ಹಲವು ಬಾರಿ ಜಿಲ್ಲಾಸ್ಪತ್ರೆ ಪೂರ್ಣಗೊಳಿಸುವ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಮುಖ್ಯಮಂತ್ರಿಗಳು ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದರೂ, ಈವರೆಗೆ ಸಚಿವರು ನೀಡಿದ ಭರವಸೆಗಳು ಇನ್ನೂ ಈಡೇರಿಲ್ಲ. ಜಿಲ್ಲೆಯ ಜನತೆಯ ಆರೋಗ್ಯ ಸೇವೆಯ ಹಿತದೃಷ್ಟಿಯಿಂದ ಜನವರಿ 15 ರೊಳಗೆ ನೂತನ ಜಿಲ್ಲಾಸ್ಪತ್ರೆ ಸೇವೆಗೆ ಲಭ್ಯವಾಗದಿದ್ದಲ್ಲಿ ರಾಜ್ಯ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ನೂತನ 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆಯ ಶೇಕಡಾ 80 ರಷ್ಟು ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು,
ಈಗಾಗಲೇ ಪೂರ್ಣಗೊಂಡಿರುವ ಆಸ್ಪತ್ರೆ ಕಾಮಗಾರಿಗಳ ಬಗ್ಗೆ ಸರಕಾರದಿಂದ ರೂ 25 ಕೋಟಿ ಹಾಗೂ ಉಳಿಕೆ ಕಾಮಗಾರಿಗಳಿಗಾಗಿ ರೂ 5 ಕೋಟಿ ಅನುದಾನದ ಅಗತ್ಯವಿದ್ದು ಒಟ್ಟು 30 ಕೋಟಿ ಅನುದಾನ ತಕ್ಷಣ ಮಂಜೂರಾಗ ಬೇಕಿದೆ.
ಒಟ್ಟು ಏಳು ಮಹಡಿಗಳನ್ನು ಒಳಗೊಂಡಿರುವ 3 ಲಕ್ಷ ಚದರ ಅಡಿಯ ನೂತನ ಜಿಲ್ಲಾ ಆಸ್ಪತ್ರೆಗೆ ಅಗತ್ಯ ಇರುವ ಬೆಡ್ ಗಳು, ವೈದ್ಯಕೀಯ ಸಲಕರಣೆಗಳು ಹಾಗೂ ಉಪಕರಣಗಳ ಖರೀದಿಗೆ ಅನುದಾನದ ಅಗತ್ಯವಿದೆ.
ಕಿಡ್ನಿ, ಹೃದಯ, ನ್ಯೂರೋ ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗಳನ್ನು ಒಳಗೊಂಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದ್ದು, ಖಾಸಗಿ ಹಾಗೂ ನೆರೆಯ ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯ ಮೇಲಿನ ಅವಲಂಬನೆಯನ್ನು ತಪ್ಪಿಸಿ, ಜಿಲ್ಲೆಯಲ್ಲಿ ಸೇವೆ ದೊರಕುವಂತಾಗಬೇಕು.
ಈ ಹಿಂದೆ ಯೋಜಿಸಿದಂತೆ ಸಂಪೂರ್ಣ ಸೌಲಭ್ಯಗಳನ್ನು ಒಳಗೊಂಡ 50 ಬೆಡ್ ಗಳ ಕ್ರಿಟಿಕಲ್ ಕೇರ್ ಯೂನಿಟ್ ಪ್ರಾರಂಭಿಸ ಬೇಕು ಹಾಗೂ 250 ಬೆಡ್ ಗಳ ಆಸ್ಪತ್ರೆಗೆ ಅನುಗುಣವಾಗಿ ಅಗತ್ಯ ವೈದ್ಯಾಧಿಕಾರಿಗಳು ಹಾಗೂ ವೈದ್ಯಕೇತರ ಸಿಬ್ಬಂದಿಗಳನ್ನು ತಕ್ಷಣ ರಾಜ್ಯ ಸರ್ಕಾರ ಮಂಜೂರಾತಿಗೆ ಕ್ರಮ ವಹಿಸಬೇಕು.
ನೂತನ ಜಿಲ್ಲಾಸ್ಪತ್ರೆಯ ನಿರ್ವಹಣಾ ವೆಚ್ಚ ಹಾಗೂ ಕೂಸಮ್ಮ ಶಂಭು ಶೆಟ್ಟಿ ತಾಯಿ ಮಕ್ಕಳ ಆಸ್ಪತ್ರೆಯ ವಿವಿಧ ನಿರ್ವಹಣಾ ಸಮಸ್ಯೆಗಳಿಗೆ ಮತ್ತು ಅನುದಾನ ಕೊರತೆಗೆ ಪರಿಹಾರ ಕಂಡುಕೊಳ್ಳುವು ಹಾಗೂ ಬಾಕಿ ಉಳಿದಿರುವ 3.5 ಕೋಟಿ ಮೆಸ್ಕಾಂ ಬಿಲ್ ಪಾವತಿಯ ಬಗ್ಗೆ ಕ್ರಮ ವಹಿಸಬೇಕಾಗಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಅಶೋಕ್, ಆರೋಗ್ಯ ಇಲಾಖೆಯ ಇಂಜಿನಿಯರ್ ಶ್ರೀ ಗುರು ಪ್ರಸಾದ್, ಜಿಲ್ಲಾಸ್ಪತ್ರೆಯ ವಿವಿಧ ವಿಭಾಗದ ವೈದ್ಯರು, ಉಡುಪಿ ನಗರಸಭೆ ಮಾಜಿ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಶ್ರೀಮತಿ ಸುಮಿತ್ರಾ ನಾಯಕ್, ನಗರಸಭಾ ಸದಸ್ಯರಾದ ಶ್ರೀ ಬಾಲಕೃಷ್ಣ ಶೆಟ್ಟಿ, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್, ಪ್ರಮುಖರಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ಶ್ರೀಮತಿ ರಶ್ಮಿತಾ ಶೆಟ್ಟಿ, ಶ್ರೀಮತಿ ನೀತಾ ಪ್ರಭು, ಶ್ರೀವತ್ಸ, ಶ್ರೀಮತಿ ಮಾಯಾ ಕಾಮತ್, ಶ್ರೀಮತಿ ದೀಪಾ, ಶ್ರೀ ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.


















