ಉಡುಪಿ: ಮೇ.13 ರಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಂದಿದ್ದು, ಉಡುಪಿ ಜಿಲ್ಲೆಯಲ್ಲಿ ಭಾರೀ ಬಹುಮತದಿಂದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಗೆದ್ದು ಬೀಗಿದ್ದಾರೆ. ಚುನಾವಣೆಯಲ್ಲಿ ಗೆದ್ದು ಬೀಗಿದ ಕೆಲವೇ ದಿನಗಳಲ್ಲಿ ಯಶ್ ಪಾಲ್ ಸುವರ್ಣ ಸಾರ್ವಜನಿಕರ ಮನಗೆಲ್ಲುವಂತಹ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ.
ಇತ್ತೀಚೆಗಷ್ಟೆ ಉಡುಪಿ ನಗರಸಭೆಗೆ ಭೇಟಿ ನೀಡಿ ಕುಡಿಯುವ ನೀರಿನ ಸಮರ್ಪಕ ವಿತರಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಬಳಿಕ ಟ್ವಿಟರ್ ನಲ್ಲಿ ಬಳಕೆದಾರರೊಬ್ಬರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ವೀಣಾ ಪೈ ಎನ್ನುವ ಬಳಕೆದಾರರು ಸರಳಬೆಟ್ಟು ವಾರ್ಡ್ ನಲ್ಲಿ ಮೂರು ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಬರೆದುಕೊಂಡಿದ್ದು, ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಶಾಸಕರು, ವಿಷಯವನ್ನು ಗಮನಕ್ಕೆ ತಂದಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ ಮತ್ತು ನಾಳೆಯೆ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದಿದ್ದಾರೆ.
ಶಾಸಕರ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜನರ ಸಮಸ್ಯೆಗೆ ಸ್ಪಂದಿಸುವ ಶಾಸಕರ ನಡೆಗೆ ವೈದ್ಯ ಪಿ.ವಿಭಂಡಾರಿ ಸಹಿತ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಧ್ಯವರ್ತಿಗಳ ಹಾವಳಿ ಇಲ್ಲದೆ ಕ್ಷೇತ್ರದ ಶಾಸಕ ನೇರವಾಗಿ ಜನರ ಸಂಪರ್ಕದಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿದಲ್ಲಿ ಹಲವಾರು ಸಮಸ್ಯೆಗಳು ಬಗೆಹರಿಯುವುದು ನಿಶ್ಚಿತ. ಶಾಸಕ ಯಶ್ ಪಾಲ್ ಸುವರ್ಣ ಅವರ ಈ ನಡೆ ಎಲ್ಲ ಶಾಸಕರಿಗೂ ಮಾದರಿಯಾಗಿ ಕ್ಷೇತ್ರದ ಸಮಸ್ಯೆಗಳು ನಿವಾರಣೆಯಾದರೆ ಮತದಾರರಿಗೂ ಹಿತ.