ಉಡುಪಿ: ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿ ಪರಶುರಾಮ ಮೂರ್ತಿಯನ್ನು ಮರು ನಿರ್ಮಿಸಲು ಕಾಂಗ್ರೆಸ್ ನವರೇ ತೊಂದರೆ ಮಾಡುತ್ತಿದ್ದಾರೆ. ಕಾರ್ಕಳದ ಪ್ರಸೋದ್ಯಮವನ್ನು ನಿರಂತರವಾಗಿ ಹಾಳು ಮಾಡುವ ಕೆಲಸವನ್ನು ಕಾರ್ಕಳದ ನಕಲಿ ಕಾಂಗ್ರೆಸಿಗರು ಮಾಡುತ್ತಿದ್ದಾರೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಶೀಘ್ರವೇ ಆರಂಭಿಸಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸುವಂತೆ ಒತ್ತಾಯಿಸಿ ಕಾರ್ಕಳದಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿಯರೆಗೆ ಬೃಹತ್ ವಾಹನ ಜಾಥವನ್ನು ಹಮ್ಮಿಕೊಳ್ಳಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಪರಶುರಾಮ ಮೂರ್ತಿಯ ವಿನ್ಯಾಸ ಬದಲಾಗಬೇಕೆಂದು 2023ರ ಸೆ.29ರಂದು ಶಿಲ್ಪಿ ಕೃಷ್ಣ ನಾಯ್ಕ್ ಅವರು ಡಿಸಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಡಿಸಿ ಅವರು 2023ರ ಅಕ್ಟೋಬರ್ 4ರಂದು ಮೂರ್ತಿಯ ವಿನ್ಯಾಯ ಬದಲಾವಣೆಗೆ ಅನುಮತಿ ಕೊಟ್ಟು ಆದೇಶ ಹೊರಡಿಸಿದ್ದರು. ಜಿಲ್ಲಾಡಳಿತದ ಆದೇಶದಂತೆ ಮೂರ್ತಿಯ ಮರು ವಿನ್ಯಾಸದ ಪ್ರಕ್ರಿಯೆಗಳು ಆರಂಭವಾಗಿತ್ತು. ಆ ನಂತರ ಉದಯ್ ಶೆಟ್ಟಿ ಮತ್ತು ಅವರ ತಂಡ ನಿರಂತರ ಅಪಪ್ರಚಾರದಲ್ಲಿ ತೊಡಗಿದೆ. ಪೊಲೀಸರು ಕೋರ್ಟ್ ಗೆ ಸಲ್ಲಿಸಿದ ಚರ್ಜ್ ಶೀಟ್ ನಲ್ಲಿಯೂ ಪರಶುರಾಮ ಮೂರ್ತಿ ಫೈಬರ್ ನದ್ದು ಅಲ್ಲ ಅಂತಾ ಉಲ್ಲೇಖಿಸಲಾಗಿದೆ. ಅಲ್ಲಿಂದ ಸುಳ್ಳಿನ ಮೆರವಣಿಗೆ ನಿಂತಿದ್ದು, ಸತ್ಯದ ವಿಜಯೋತ್ಸವ ಆರಂಭ ಆಗಿದೆ. ಸುಳ್ಳಿನ ಕಂತೆಯನ್ನು ಹೇಳುತ್ತಾ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಗುಡುಗಿದರು.
ನಾನು ಶಾಸಕ, ಸಚಿವನಾಗಿ ಕಾರ್ಕಳವನ್ನು ಅಭಿವೃದ್ಧಿ ಮಾಡಬೇಕೆಂದು ಹಲವು ಯೋಜನೆಗಳನ್ನು ತಂದಿದ್ದೇನೆ. ಆದರೆ, ಈ ಎಲ್ಲ ಯೋಜನೆಗಳನ್ನು ಹಳ್ಳ ಹಿಡಿಸಬೇಕೆಂಬ ಪ್ರಯತ್ನವನ್ನು ಕಾಂಗ್ರೆಸ್ ಪರಶುರಾಮ ಥೀಮ್ ಪಾರ್ಕ್ ಮೂಲಕ ಮಾಡುತ್ತಿದೆ. ಕಾರ್ಕಳಕ್ಕೆ ಉಪಮುಖ್ಯಮಂತ್ರಿ ಬಂದಾಗ ಅವರ ಬಾಯಿಯಲ್ಲಿ ಚುನಾವಣೆಯವರೆಗೂ ಪರಶುರಾಮ ವಿಚಾರ ಇರಲಿ ಎಂದು ಹೇಳಿಸುತ್ತಾರೆ. ಬಿಜೆಪಿ ಅಭಿವೃದ್ಧಿ ಮಾಡಬೇಕೆಂದು ಹೇಳುತ್ತೆ, ಕಾಂಗ್ರೆಸ್ ಅಭಿವೃದ್ಧಿ ನಿಲ್ಲಿಸುತ್ತೆ ಹೇಳುತ್ತೆ. ಇದೇ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಇರುವ ವ್ಯತ್ಯಾಸ ಎಂದು ಟೀಕಿಸಿದರು.
ಕಾಂಗ್ರೆಸ್ ಮುಖಂಡರು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಇದು ಸರಿಯಲ್ಲ. ಇದು ಹೀಗೆ ಮುಂದುವರಿದರೆ ರಸ್ತೆ ತಡೆದು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ. ಬಿಜೆಪಿಯ ಶಕ್ತಿ ಏನೆಂಬುವುದನ್ನು ಕಾಂಗ್ರೆಸ್ ನ ನಕಲಿ ಮುಖಂಡರಿಗೆ ತೋರಿಸುತ್ತೆವೆ ಎಂದು ಎಚ್ಚರಿಸಿದ್ರು.












