ಉಡುಪಿ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಂಜೂರಾದ ಜಮೀನಿನಲ್ಲಿ 10 ಸೆಂಟ್ಸ್ ವರೆಗಿನ ಜಮೀನನ್ನು ಸ್ವಂತ ವಾಸ್ತವ್ಯದ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ಜಿಲ್ಲಾಧಿಕಾರಿಯವರ ಹಂತದಲ್ಲೇ ಅವಕಾಶ ಕಲ್ಪಿಸಿ ನ. 05 ರಂದು ಸರ್ಕಾರ ಆದೇಶ ಹೊರಡಿಸಿದೆ. ಈ ವಿಚಾರದ ಕುರಿತು ಶಾಸಕ ರಘುಪತಿ ಭಟ್ ಸದನದಲ್ಲಿ ವಿಷಯ ಪ್ರಸ್ತಾಪಿಸಿ, ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಅಲ್ಲದೆ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಅಧಿಕಾರಿಗಳ ಗಮನಕ್ಕೆ ತಂದು ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿ ಈ ಕುರಿತಾಗಿ ಸರಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಿದ್ದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿ ಈ ಆದೇಶ ಜಾರಿಗೊಳಿಸುವಲ್ಲಿ ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಿದ ಶಾಸಕ ರಘುಪತಿ ಭಟ್ ಅವರಿಗೆ ಪರಿಶಿಷ್ಟ ಪಂಗಡದ ಮರಾಟಿ ಸಮುದಾಯದ ಮುಖಂಡರು ಭಾನುವಾರದಂದು ಶಾಸಕ ರಘುಪತಿ ಭಟ್ ಅವರ ಮನೆಗೆ ತೆರಳಿ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅನಂತ ಎಸ್ ನಾಯ್ಕ್, ಉಪಾಧ್ಯಕ್ಷ ಉಮೇಶ್ ಎ ನಾಯ್ಕ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ವಿ. ನಾಯ್ಕ್, ನಗರಸಭಾ ಸದಸ್ಯ ಅಶೋಕ್ ನಾಯ್ಕ್, ಉಡುಪಿ ಜಿಲ್ಲಾ ಎಸ್.ಟಿ ಮೋರ್ಚಾದ ಅಧ್ಯಕ್ಷನಿತ್ಯಾನಂದ ನಾಯ್ಕ್, ಗ್ರಾಮಾಂತರ ಎಸ್.ಟಿ ಮೋರ್ಚಾದ ಅಧ್ಯಕ್ಷ ಸುಬ್ರಹ್ಮಣ್ಯ ನಾಯ್ಕ್ ಹಾಗೂ ಮರಾಟಿ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಕಚ್ಚೂರು ಮಾಲ್ತಿದೇವಿ ದೇವಸ್ಥಾನ ಬಬ್ಬುಸ್ವಾಮಿ ಮೂಲಕ್ಷೇತ್ರದ ಆಡಳಿತ ಮಂಡಳಿ ವತಿಯಿಂದಲೂ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಚ್ಚೂರು ಮಾಲ್ತಿದೇವಿ ದೇವಸ್ಥಾನ ಬಬ್ಬುಸ್ವಾಮಿ ಮೂಲಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಗೋಕುಲ್ ದಾಸ್, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ್ ಬಾರ್ಕೂರು, ಪದಾಧಿಕಾರಿಗಳಾದ ರವಿರಾಜ್, ವಾಸುದೇವ್ ಹಂಗಾರಕಟ್ಟೆ, ಜನಾರ್ಧನ್ ಸಾಲ್ಯಾನ್, ಉದಯ್ ಅಂಚನ್, ನವೀನ್, ಗುರಿಕಾರರಾದ ಕಮಲಾಕ್ಷ ಉಪಸ್ಥಿತರಿದ್ದರು.