ಉಡುಪಿ: ಇಲ್ಲಿನ ಮಣಿಪಾಲ – ಪೆರಂಪಳ್ಳಿ – ಶೀಂಬ್ರ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸಲು ಶಾಸಕ ಕೆ. ರಘುಪತಿ ಭಟ್ ರವರ ಶಿಫಾರಸ್ಸಿನ ಮೇರೆಗೆ ರೂ. 7.00 ಕೋಟಿ ಅನುದಾನ ಮಂಜೂರಾಗಿ ಭಾಗಶಃ ಕಾಮಗಾರಿ ಪೂರ್ಣಗೊಂಡಿರುತ್ತದೆ. ಈ ರಸ್ತೆ ಹಾದುಹೋಗುವ ಪೆರಂಪಳ್ಳಿಯ ಶೀಂಬ್ರ ಬ್ರಿಡ್ಜ್ ಬಳಿ ರಸ್ತೆ ಅಗಲೀಕರಣಕ್ಕೆ ಖಾಸಗಿ ಜಾಗದ ಸಮಸ್ಯೆ ಉಂಟಾಗಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿತ್ತು. ಇದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಸ್ಥಳೀಯರ ಮನವಿಯಂತೆ ಶಾಸಕರು ಶನಿವಾರದಂದು ಜಿಲ್ಲಾಧಿಕಾರಿಗಳಾದ ಕೂರ್ಮಾ ರಾವ್ ಎಂ. ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ ಪಡಿಸಲು ರೂ. 50.00 ಲಕ್ಷ ಮಂಜೂರಾಗಿದ್ದು ಭೂಸ್ವಾಧೀನ ಪ್ರಕ್ರಿಯೆ ಮೂಲಕ ಜಾಗ ಬಿಟ್ಟುಕೊಡುವ ಖಾಸಗಿ ಜಾಗದ ಮಾಲಕರಿಗೆ ಪರಿಹಾರ ನೀಡುವುದಾಗಿ ಶಾಸಕರು ತಿಳಿಸಿದರು. ಇದಕ್ಕೆ ಖಾಸಗಿ ಜಾಗದ ಮಾಲಕರು ಸಮ್ಮತಿ ಸೂಚಿಸಿದರು. ಶೀಘ್ರವೇ ರಸ್ತೆ ಕಾಮಗಾರಿಯನ್ನು ಆರಂಭಿಸುವಂತೆ ಶಾಸಕರು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಶ ಕೊಡವೂರು, ನಗರ ಸಭೆಯ ನಾಮ ನಿರ್ದೇಶಿತ ಸದಸ್ಯೆ ಅರುಣಾ ಪೂಜಾರಿ, ಉಡುಪಿ ನಗರ ಸಭೆ ಪೌರಾಯುಕ್ತ ಉದಯ್ ಶೆಟ್ಟಿ, ಉಡುಪಿ ತಹಶೀಲ್ದಾರ್ ಮಹೇಶ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ದಿನೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಾಯಕ, ನಗರ ಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶ್ವಂತ್ ಪ್ರಭು, ಕಂದಾಯ ನಿರೀಕ್ಷಕ ಉಪೇಂದ್ರ, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಗಿರೀಶ್ ಹಾಗೂ ಭೂಮಾಪನಾಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.