ಬೆಂಗಳೂರು: ಶನಿವಾರ ರಾತ್ರಿ ಬೆಂಗಳೂರಿನ ನಿವಾಸದಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣ ರಾಜ್ಯದಲ್ಲಿ ಚರ್ಚೆ ಹುಟ್ಟುಹಾಕಿದೆ. ರಿಯಲ್ ಎಸ್ಟೇಟ್ ಮಾಫಿಯಾ ಸೇರಿದಂತೆ ರಾಜಕಾಲುವೆ ಒತ್ತುವರಿ ವಿಚಾರಗಳು ಇದೀಗ ಮುನ್ನಲೆಗೆ ಬರುತ್ತಿವೆ. ಇದೀಗ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ಹೆಸರು ಪ್ರಕರಣಕ್ಕೆ ಥಳಕು ಹಾಕಿಕೊಂಡಿದೆ. ಪ್ರಕರಣದಲ್ಲಿ ಮುನಿರತ್ನ ಅವರ ವಿಚಾರಣೆ ಮಾಡಬೇಕು ಎಂದು ಕೆಪಿಸಿಸಿ ಕಾನೂನು ಘಟಕದ ಮುಖಂಡ ಸೂರ್ಯ ಮುಕುಂದರಾಜ್ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸೂರ್ಯ ಮುಕುಂದರಾಜ್, ದಾಖಲೆಗಳನ್ನು ಹಂಚಿಕೊಂಡಿದ್ದಾರೆ. “ಕೊಲೆಯಾಗಿರುವ ಹಿರಿಯ ಭೂವಿಜ್ಞಾನಿ ಪ್ರತಿಮಾ ಅವರು ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಶಾಸಕ ಸಿಡಿ ಕಂಪನಿಗಳ ಮಾಲೀಕ ಮುನಿರತ್ನ ವಿರುದ್ಧ ಅಕ್ರಮ ಸ್ಪೋಟಕ ಬಳಕೆ ಮಾಡಿ ಕಲ್ಲು ಶಿಲೆಗಳನ್ನು ಪುಡಿ ಮಾಡಿದ್ದ ಸಂಬಂಧ ಹಾಗೂ ಸರ್ಕಾರಕ್ಕೆ 25 ಲಕ್ಷ ರಾಯಧನ ನಷ್ಟ ಮಾಡಿದ್ದ ಕಾರಣಕ್ಕೆ ಹುಣಸಮಾರನಹಳ್ಳಿ ಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಬಹುಶಃ ಇವರ ಸಹೋದರನ ಹಳೆ ನಂಟು ಈ ಕೊಲೆ ಪ್ರಕರಣದಲ್ಲಿ ಏನಾದರೂ ಹಸ್ತಕ್ಷೇಪ ಮಾಡಿರಬಹುದು ಪೊಲೀಸರು ತನಿಖೆ ನಡೆಸಬಹುದು” ಎಂದು ಭಾವಿಸುತ್ತೇನೆ ಎಂದು ದಾಖಲೆಗಳ ಸಮೇತ ಮಾಹಿತಿ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುನಿರತ್ನ, ಈ ಪ್ರಕರಣದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಲೋಕಸಭೆ ಚುನಾವಣೆಯ ವೇಳೆಗೆ ಮುನಿರತ್ನ ಹೊರಗೆ ಇರಬಾರದು ಅಂತ ಪ್ರಯತ್ನಿಸುತ್ತಿದ್ದಾರೆ. ನನ್ನನ್ನು ತಿಹಾರ್ ಜೈಲಿಗೆ ಕಳಿಸಬೇಕು ಅಂತ ಪ್ರಯತ್ನ ಮಾಡುತ್ತಿದ್ದು ಅದು ಆಗುತ್ತಿಲ್ಲ, ನನ್ನ ಮನೆ ಮುಂದೆ ನಡೆಯುವ ಅಪಘಾತವನ್ನೂ ನನ್ನ ತಲೆಗೆ ಕಟ್ಟುವ ಸನ್ನಿವೇಶ ಇದೆ ಎಂದು ಆರೋಪಿಸಿದ್ದಾರೆ. ಈಗ ಪ್ರತಿಮಾ ಕೊಲೆ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಈ ಹಂತದಲ್ಲಿ ನಾನು ಮಾತನಾಡುವುದು ಸರಿಯಲ್ಲ, ಸೂಕ್ತವೂ ಅಲ್ಲ. ಒಬ್ಬ ವ್ಯಕ್ತಿಯನ್ನು ರಾಜಕೀಯವಾಗಿ ಮುಗಿಸಬೇಕು ಅನ್ನೋರಿಗೆ ತನಿಖೆ ಬಳಿಕ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.
ಮುನಿರತ್ನ ಅವರ ಹುಣಸಮಾರನಹಳ್ಳಿ ಜಮೀನಿನಲ್ಲಿ ಜಿಲೆಟಿನ್ ಸ್ಫೋಟ ಸಂಬಂಧ ಪ್ರತಿಮಾ ಅವರು ಸ್ಥಳ ಪರಿಶೀಲನೆ ನಡೆಸಿದ್ದರು ಎನ್ನಲಾಗಿದೆ.
ಈ ಮಧ್ಯೆ ಕೊಲೆ ಆರೋಪಿ ಕಿರಣ್ ತಪ್ಪೊಪ್ಪಿಕೊಂಡಿದ್ದು, ತಾನು ಸರ್ಕಾರಿ ಕೆಲಸದಲ್ಲಿದ್ದೆ ಎಂದು ಹೇಳಿ ಮದುವೆಯಾಗಿದ್ದು ವಾರದ ಹಿಂದೆ ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದ ಕುಪಿತಗೊಂಡ ಹೆಂಡತಿ ತವರು ಮನೆಗೆ ತೆರಳಿದ್ದಳು. ಇದರಿಂದ ಕೋಪಗೊಂಡಿದ್ದ ಕಿರಣ್ ಗಣಿ ಅಧಿಕಾರಿ ಪ್ರತಿಮಾ ಅವರ ಮನೆಗೆ ತೆರಳಿ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ದಂಬಾಲು ಬಿದ್ದಿದ್ದು ಆಕೆ ನಿರಾಕರಿಸಿದಾಗ ಕತ್ತು ಸೀಳಿ ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ.