ಉಡುಪಿ: ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ 169ಎ ಇದರ ಕರಾವಳಿ ಜಂಕ್ಷನ್ನಿಂದ ಮಲ್ಪೆವರೆಗಿನ ಚತುಷ್ಪಥ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಸೋಮವಾರದಂದು ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ವಿವಿಧ ಇಲಾಖಾಧಿಕಾರಿಗಳ ಸಭೆಯು ನಗರಸಭೆಯ ಸಭಾಭವನದಲ್ಲಿ ನಡೆಯಿತು. ರಸ್ತೆ ಕಾಮಗಾರಿಯ ಭೂಸ್ವಾಧೀನ 3ಡಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರ ಕಾಮಗಾರಿ ಆರಂಭಿಸುವ ವಿಚಾರವಾಗಿ ಶಾಸಕರು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಅರಣ್ಯ ಇಲಾಖೆ, ಮೆಸ್ಕಾಂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಘುಪತಿ ಭಟ್, ಪರ್ಕಳದಿಂದ ಮಲ್ಪೆವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಮುಗಿದು ಪರ್ಕಳದಿಂದ ಕಾಮಗಾರಿ ಪ್ರಾರಂಭವಾಗಿದೆ. ಕರಾವಳಿ ಜಂಕ್ಷನ್ನಿಂದ ಮಲ್ಪೆವರೆಗಿನ ರಸ್ತೆ ಚತುಷ್ಪಥ ಕಾಮಗಾರಿ ಕೈಗೊಳ್ಳಲು ಭೂಸ್ವಾಧೀನ ಪ್ರಕ್ರಿಯೆ ನಡೆಸಿ, ಭೂಮಾಲೀಕರಿಗೆ ಸೂಕ್ತ ಪರಿಹಾರ ಕಲ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಪಕ್ರಿಯೆಯನ್ನು ಬೇಗನೆ ಪೂರ್ಣಗೊಳಿಸಿ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸುವ ಮತ್ತು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಬಾಕಿ ಇದ್ದು ಅದನ್ನು ನೆರವೇರಿಸಿದ ಬಳಿಕ ಸೇತುವೆ ಕಾಮಗಾರಿಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ್ ನಾಯಕ್, ಸಹಾಯಕ ಅಭಿಯಂತರ ಮಂಜುನಾಥ್ ನಾಯಕ್, ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ರಾಕೇಶ್, ಉಪಅರಣ್ಯ ಸಂರಕ್ಷಣಾಧಿಕಾರಿ ಉದಯ್ ನಾಯಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೋ, ಉಡುಪಿ ತಹಶೀಲ್ದಾರ್ ಮಹೇಶ್, ಕಂದಾಯ ನಿರೀಕ್ಷಕ ಉಪೇಂದ್ರ ಮತ್ತು ಇತರರು ಉಪಸ್ಥಿತರಿದ್ದರು.