ಕೊಟ್ಟಾರ ಚೌಕಿಗೆ ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಹೆಸರು: ಶಾಸಕ ಭರತ್ ಶೆಟ್ಟಿ

ಮಂಗಳೂರು: ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಕರ್ನಾಟಕದ ವೀರ ಯೋಧ ದಿವಂಗತ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ನಗರದ ಕೊಟ್ಟಾರ ಚೌಕಿ ಜಂಕ್ಷನ್‌ಗೆ ನಾಮಕರಣ ಮಾಡಲಾಗುವುದು ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದ್ದಾರೆ.

ಕೊಟ್ಟಾರ ಚೌಕಿಯಲ್ಲಿ ಅಮರ್ ಜವಾನ್ ಥೀಮ್ ಪಾರ್ಕ್ ನಿರ್ಮಿಸಲಾಗುವುದು. ಆದ್ದರಿಂದ, ಉದ್ಯಾನವನದ ಸಮೀಪವಿರುವ ಈ ವೃತ್ತಕ್ಕೆ ಮಂಗಳೂರು ನಗರದಲ್ಲಿ ಬೆಳೆದ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ಇಡುವುದು ಸೂಕ್ತವಾಗಿದೆ. ಈ ಕುರಿತು ಪತ್ರ ಮುಖೇನ ಮಂಗಳೂರು ಮಹಾನಗರ ಪಾಲಿಕೆಗೆ ಸೂಚನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಲಕ್ಷಾಂತರ ರೂಪಾಯಿ ಸಂಭಾವನೆ ನೀಡುವ ಉದ್ಯೋಗದ ಕನಸು ಕಾಣದೆ ಬಾಲ್ಯದಿಂದಲೇ ಸೇನೆಗೆ ಸೇರಲು ನಿರ್ಧರಿಸಿದ ದಿವಂಗತ ಕ್ಯಾಪ್ಟನ್ ಪ್ರಾಂಜಲ್ ಅವರ ನಿರ್ಧಾರ ಯುವ ಪೀಳಿಗೆಗೆ ಸ್ಫೂರ್ತಿಯಾಗಿದೆ. ಅವರ ಕುಟುಂಬಕ್ಕೆ ಈ ಅಕಾಲಿಕ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.