ಉಡುಪಿ: ಎಲ್ಲ ತರಕಾರಿ ಬೆಳೆಗಳಿಗಿಂತ ಮಟ್ಟುಗುಳ್ಳ ಭಿನ್ನವಾಗಿದ್ದು, ಮಟ್ಟುವಿನ ಮಣ್ಣಿನ ಗುಣ, ಗುಳ್ಳದ ಬೀಜದ ಮಹತ್ವದ ಬಗ್ಗೆ ಸಂಶೋಧನೆ ಮಾಡಬೇಕಾದ ಅಗತ್ಯವಿದೆ ಎಂದು ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಹೇಳಿದರು.
ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಮಟ್ಟುಗುಳ್ಳ ಕೃಷಿಯ ಸುಸ್ಥಿರ ಅಭಿವೃದ್ಧಿ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲ ಖಾದ್ಯಪ್ರಿಯರಿಗೆ ಮಟ್ಟುಗುಳ್ಳದ ಪರಿಚಯವಿದೆ. ಮಟ್ಟುಗುಳ್ಳ ಎಂಬ ತರಕಾರಿ ಇಂದು ಜಗತ್ತಿನಾದ್ಯಂತ ಪಸರಿಸಿ ಮಟ್ಟುಗ್ರಾಮದ ಹೆಸರನ್ನು ಗುರುತಿಸುವಂತೆ ಮಾಡಿದೆ. ಇದಕ್ಕೆ ಗುಳ್ಳದ ಬೀಜ ನೀಡಿರುವ ವಾದಿರಾಜರೇ ಕಾರಣ. ಮಟ್ಟುಗುಳ್ಳವನ್ನು ಮಟ್ಟು ಭೂಮಿಯಲ್ಲಿ ಬೆಳೆದರೆ ಮಾತ್ರ ಅದರ ರುಚಿ ಬರುತ್ತದೆ. ಇದುವೇ ಆ ಬೀಜದ ಮಹತ್ವ. ಈ ಬೀಜವನ್ನು ವಾದಿರಾಜರು ಬಂಗಾಳದಿಂದ ತಂದಿರುವ ಪ್ರತೀತಿಯಿದೆ ಎಂದರು.
ಜನರಲ್ಲಿ ಕೃಷಿಯಲ್ಲಿ ಲಾಭ ಕಡಿಮೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ರೈತರು ಮಧ್ಯವರ್ತಿಗಳ ಹಾವಳಿಯಿಂದ ತಾವು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ದರ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಮಟ್ಟುಗುಳ್ಳವನ್ನು ಉಳಿಸಿಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಗುಳ್ಳದ ಮಾರ್ಕೆಟಿಂಗ್ ಮಾಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಉತ್ತಮ ದರ ಸಿಗುತ್ತಿದೆ:
ಪೆರಂಪಳ್ಳಿ ಗುಳ್ಳವನ್ನು ಮಟ್ಟುಗುಳ್ಳವೆಂದು ವಂಚಿಸಿ ಮಾರಾಟ ಮಾಡುತ್ತಿದ್ದರು. ಅದಕ್ಕಾಗಿ ನಾವು ಮಟ್ಟುಗುಳ್ಳಕ್ಕೆ ಸ್ಟಿಕ್ಕರ್ ಅಂಟಿಸಿ ಮಾರಾಟ ಮಾಡುತ್ತಿದ್ದು, ಇದರಿಂದ ವಂಚನೆ ಮಾಡಲು ಆಗುವುದಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಟ್ಟುಗುಳ್ಳಕ್ಕೆ
ಒಳ್ಳೆಯ ದರ ಸಿಗುತ್ತಿದೆ. ಹಿಂದೆ ಒಂದು ಎಕರೆಯಲ್ಲಿ ಮಟ್ಟುಗುಳ್ಳ ಬೆಳೆಯುತ್ತಿದ್ದವರು, ಈಗ ಎರಡು ಎಕರೆ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಇಳುವರಿ ಕೂಡ ಹೆಚ್ಚಿದೆ ಎಂದು ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ ಹೇಳಿದರು.
ಮಟ್ಟುಗುಳ್ಳವನ್ನು ಎರಡ್ಮೂರು ತಿಂಗಳು ಹಾಳಾಗದಂತೆ ಶೇಖರಿಸಿಡಬಹುದು. ಅದಕ್ಕಾಗಿ ಸುಸಜ್ಜಿತ ಕೊಠಡಿಯ ಅಗತ್ಯವಿದ್ದು, ಸ್ವಂತ ಜಾಗ ಹುಡುಕಾಟದಲ್ಲಿದ್ದೇವೆ. ಇದಕ್ಕೆ ನಬಾರ್ಡ್ನಿಂದ ಅಗತ್ಯ ನೆರವು ಸಿಗುವ ಭರವಸೆ ಇದೆ. ಸದ್ಯ ಮಟ್ಟುಗುಳ್ಳ ಬೆಳೆಗಾರರ ಸಂಘದ ಮೂಲಕ ಕಾರ್ಯಚಟುವಟಿಕೆ ನಡೆಯುತ್ತಿದೆ. ಇದನ್ನು ಸೊಸೈಟಿ ಮಾಡುವ ಉದ್ದೇಶವಿದ್ದು, ಮುಂದೆ ಸೊಸೈಟಿಯ ಮೂಲಕವೇ ಗುಳ್ಳದ ಖರೀದಿ ಮತ್ತು ಮಾರಾಟ ನಡೆಯಲಿದೆ. ಬೆಳೆಗಾರರಿಗೆ ಶೂನ್ಯ ಬಡ್ಡಿದರಲ್ಲಿ ಸಾಲ ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದರು. ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೃಷ್ಣರಾವ್ ಕೊಡಂಚ ಮಾತನಾಡಿ, ಮಟ್ಟು ಪ್ರದೇಶವನ್ನು ಮಟ್ಟುಗುಳ್ಳ ಬೆಳೆಸಲು ಸಿಮೀತಗೊಳಿಸಬೇಕು. ಕಾನೂನಿನಡಿಯಲ್ಲಿ ಸೂಕ್ತ ನಿಯಾಮವಳಿಯನ್ನು ರೂಪಿಸಬೇಕು. ಇಲ್ಲದಿದ್ದರೆ ಈ ಪ್ರದೇಶ ಇತರೆ ಉದ್ದೇಶಗಳಿಗೆ ಉಪಯೋಗ ಆಗುವ ಸಾಧ್ಯತೆಗಳಿವೆ. ಕೃಷಿ ಆಹಾರ ಉತ್ಪಾದನೆ ಮಾಡುವ ಕ್ಷೇತ್ರವಾಗಿದ್ದು, ಇದಕ್ಕೆ ಕೈಗಾರಿಕೆ ಮಾನ್ಯತೆ ನೀಡಬೇಕು. ಆಗ ಸರ್ಕಾರ ಕೂಡ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಇದರಿಂದ ಕೃಷಿಯನ್ನು ಇನ್ನಷ್ಟು ವಿಸ್ತರಣೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಮಣಿಪಾಲ ಎಂಐಎಂ ನಿರ್ದೇಶಕ ಡಾ. ರವೀಂದ್ರನಾಥ್ ನಾಯಕ್ ಸ್ವಾಗತಿಸಿದರು. ಸಂಸ್ಥೆಯ ಸೆಂಟರ್ ಫಾರ್ ಸೋಶಿಯಲ್ ಎಂಟರ್ಪ್ರಿನರ್ಶಿಫ್ ಸಂಯೋಜಕ ಡಾ. ಹರೀಶ್ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಫ್ತು ಮಾಡುವ ಉದ್ದೇಶವಿದೆ:
ಮಟ್ಟುಗುಳ್ಳಕ್ಕೆ ಉತ್ತಮ ಮಾರ್ಕೆಟಿಂಗ್ ಮಾಡಲಾಗುತ್ತಿದ್ದು, ವಿದೇಶಗಳಿಗೂ ರಫ್ತು ಮಾಡುವ ಉದ್ದೇಶವಿದೆ. ಮಲ್ಲಿಗೆಯಂತೆ ವಾರಕ್ಕೊಮ್ಮೆ ದರ ನಿಗದಿ ಮಾಡಲಾಗುತ್ತಿದೆ. ರಾಸಾಯನಿಕ ಗೊಬ್ಬರದ ಬದಲಾಗಿ ಎರೆಹುಳ ಹಾಗೂ ಹಟ್ಟಿಗೊಬ್ಬರ ಬಳಸುತ್ತಿದ್ದೇವೆ. ರಾಸಾಯನಿಕ ಸಿಂಪಡಣೆಯನ್ನು ಕಡಿಮೆ ಮಾಡಿದ್ದೇವೆ. ಇದರಿಂದ ಗುಳ್ಳದ ರುಚಿ ಮತ್ತಷ್ಟು ಹೆಚ್ಚಿದೆ ಎಂದು ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ ಹೇಳಿದರು.