ಸಮಾಜಕ್ಕೆ ನೀಡಿದ ಅತ್ಯುತ್ತಮ ಕೊಡುಗೆ ಮಿಷನ್ ಆಸ್ಪತ್ರೆ: ಶತಮಾನೋತ್ಸವ ಸಂಭ್ರಮದಲ್ಲಿ ಫಾ.ಹೇಮಚಂದ್ರ ಕುಮಾರ್ ಅಭಿಮತ

ಉಡುಪಿ: ಸುಮಾರು ನೂರು ವರ್ಷಗಳ ಹಿಂದೆ ಅತ್ಯಂತ ಕಠಿಣ ಸಂದರ್ಭದಲ್ಲಿ ಪ್ರಾರಂಭವಾದ ಲೊಂಬಾರ್ಡ್(ಮಿಷನ್) ಆಸ್ಪತ್ರೆ ಸಮಾಜಕ್ಕೆ ನೀಡಿದ ಅತ್ಯುತ್ತಮ ಕೊಡುಗೆಯಾಗಿದೆ. ಡಾ ಈವಾ ಲೊಂಬಾರ್ಡ್ ಎಂಬ ಸ್ವಿಸ್ ಮಿಷನರಿ ವೈದ್ಯರು ಇಲ್ಲಿನ ಬಡ ಜನರಿಗಾಗಿ ಸ್ಥಾಪಿಸಿದ ಆಸ್ಪತ್ರೆಯು ಇಂದು ಶತಮಾನೋತ್ಸವವನ್ನು ಆಚರಿಸುತ್ತಿರುವುದು ಸಂತಸದ ವಿಚಾರ ಎಂದು ಕೆ.ಎಸ್.ಡಿ ಬಿಷಪ್ ರ.ಫಾ ಹೇಮಚಂದ್ರ ಕುಮಾರ್ ಅಭಿಪ್ರಾಯ ಪಟ್ಟರು.

ಅವರು ಗುರುವಾರದಂದು ಮಿಷನ್ ಆಸ್ಪತ್ರೆಯ ಶತಮಾನೋತ್ಸವ ಸಮಾರಂಭದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಿಷನ್ ಆಸ್ಪತ್ರೆಯು ಜನರ ನಾಡಿ ಮಿಡಿತ ಅರಿತು ಕಡಿಮೆ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆಯನ್ನು ನೀಡುತ್ತಾ ಬಂದಿದೆ. ಇದಕ್ಕೆ ಈವಾ ಲೋಂಬಾರ್ಡ್ ಅವರ ಸಾಧನೆಯೆ ಪ್ರೇರಣೆ. ಏನೂ ಇಲ್ಲದ ಕಾಲದಲ್ಲಿ ನಿರ್ಗತಿಕರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ದೂರಾಲೋಚನೆಯಿಂದ ಆಸ್ಪತ್ರೆಯನ್ನು ಸ್ಥಾಪಿಸಿ ತಮ್ಮನ್ನು ಜನರ ಸೇವೆಗೆ ಲೋಂಬಾರ್ಡ್ ಕುಟುಂಬ ಸಮರ್ಪಿಸಿದೆ. ಆಸ್ಪತ್ರೆಯ ಇಂದಿನ ಸಾಧನೆಗೆ ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿಗಳ ಪರಿಶ್ರಮ ಮತ್ತು ನಿಸ್ವಾರ್ಥ ಸೇವೆ ಕಾರಣ. ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ ಅವರ ತ್ಯಾಗ ಮತ್ತು ಸಮರ್ಪಣೆ ಈ ಆಸ್ಪತ್ರೆಯನ್ನು ಉತ್ತುಂಗಕ್ಕೇರಿಸಿದ್ದು, ಮುಂದಿನ ದಿನಗಳಲ್ಲಿ ಆಸ್ಪತ್ರೆಯು ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಝುಮ್ ದಾರ್ ಶಾ ಸಂಸ್ಥೆಗಳ ಎಂಡಿ ಪೌಲ್ ಸಾಲಿನ್ಸ್ ಮಾತನಾಡಿ ತಮ್ಮ ತಾಯಿ ಇಲ್ಲಿನ ಮೊದಲ ಭಾರತೀಯ ನಿರ್ದೇಶಕಿಯಾಗಿ ಕೆಲಸ ಮಾಡಿರುವುದನ್ನು ಸ್ಮರಿಸಿಕೊಂಡರು. ಡಾ. ಸುಶೀಲ್ ಜತ್ತನ್ನ ಮತ್ತು ಅವರ ತಂಡದವರ ಪರಿಶ್ರಮದದಿಂದ ಆಸ್ಪತ್ರೆಯು ಬೆಳವಣಿಗೆಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಲಿ ಎಂದು ಶುಭ ಹಾರೈಸಿದರು.

ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಅವರನ್ನು ಸನ್ಮಾನಿಸಲಾಯಿತು.

ಆಸ್ಪತ್ರೆಯಲ್ಲಿ ಹೊಸದಾಗಿ ಪ್ರಾರಂಭವಾದ ಸಿಟಿ ಸ್ಕ್ಯಾನ್ ಘಟಕ ಮತ್ತು ಎಟಿಎಂ ಅನ್ನು ಉದ್ಘಾಟಿಸಲಾಯಿತು.

ಕೆ.ಎಸ್.ಡಿ ಉಪಾಧ್ಯಕ್ಷ ರೆ.ವಿಕ್ಟರ್, ಉಡುಪಿ ಸಹಕಾರಿ ಬ್ಯಾಂಕ್ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಕೆ.ಎಸ್.ಡಿ ಖಜಾಂಜಿ ವಿನ್ಸೆಂಟ್ ಪಾಲನ್ನ, ಯುಬಿಎಂಸಿ ಮುಂಬೈ ಅಧ್ಯಕ್ಷ ವಿಶಾಲ್ ಶಿರಿ, ವೈ.ಎಂ.ಸಿ.ಎ ಉಪಾಧ್ಯಕ್ಷ ನೋಯಲ್ ಅಮ್ಮನ್ನ, ಕೆ.ಎಸ್.ಡಿ ಕಾರ್ಯದರ್ಶಿ ವಿಲಿಯಂ ಕಾರಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ ಕಾಂಚನ್, ಮಲ್ಪೆ ಚರ್ಚಿನ ಫಾ. ಕುಮಾರ್ ಸಾಲಿನ್ಸ್, ಐವನ್ ಡಿ.ಸೋನ್ಸ್, ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.