ನಾಪತ್ತೆಯಾಗಿ ಮೂರು ತಿಂಗಳು ಕಳೆದರೂ ಪತ್ತೆಯಾಗಿಲ್ಲ ಉಡುಪಿ ಪಬ್ಲಿಕ್ ಪ್ರಾಸಿಕ್ಯೂಟರ್ ತಾಯಿ

ಉಡುಪಿ: ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಲು ಹಗಲಿರುಳು ಶ್ರಮಿಸುವ ಉಡುಪಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಜಯರಾಮ ಶೆಟ್ಟಿ ಅವರ ತಾಯಿ ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದು, ಇವರ ಬಗ್ಗೆ ಸುಳಿವು ಇನ್ನೂ ಲಭ್ಯವಾಗಿಲ್ಲ.

ಉಡುಪಿ ಜಿಲ್ಲಾ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಜಯರಾಮ ಶೆಟ್ಟಿಯವರ ತಾಯಿ ವನಜಾ ಶೆಡ್ತಿಯವರು ಬ್ರಹ್ಮಾವರದ ವರಂಬಳ್ಳಿಯಲ್ಲಿ ತಮ್ಮ ಇನ್ನೊಬ್ಬ ಮಗನ ಮನೆಯಲ್ಲಿ ವಾಸವಾಗಿದ್ದು, ನವೆಂಬರ್ 14, 2022 ರಂದು, ಆಕೆ ಏಕಾಏಕಿ ಮನೆಯಿಂದ ಕಾಣೆಯಾಗಿದ್ದಾರೆ.

ಜಯರಾಮ್ ಶೆಟ್ಟಿ ಮತ್ತು ಮನೆಯವರು ಆಕೆಗಾಗಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಿಲ್ಲದ ಕಾರಣ ಪೊಲೀಸ್ ಠಾಣೆಗೆ ತೆರಳಿ ತಾಯಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಆದರೆ, ಕಳೆದ ಮೂರು ತಿಂಗಳಿನಿಂದ ಎಲ್ಲಾ ಕಡೆ ಹುಡುಕಾಡಿದರೂ ಆಕೆಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.

ವನಜಾ ಶೆಡ್ತಿಯವರು ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದು, ಒಮ್ಮೆ ಮನೆಯಿಂದ ಹೊರಹೋದರೆ ತಿರುಗಿ ಮನೆಗೆ ಬರುವ ಸಾಮರ್ಥ್ಯ ಅವರಿಗಿಲ್ಲ. ಜಯರಾಮ ಶೆಟ್ಟಿಯವರ ಸಹೋದರನ ಮನೆಯಿಂದ ಅನತಿ ದೂರದಲ್ಲಿಯೆ ರಾಷ್ಟ್ರೀಯ ಹೆದ್ದಾರಿ ಇದ್ದು, ಇಲ್ಲಿ ನಾಲ್ಕು ರಸ್ತೆಗಳು ವಿಭಜನೆಯಾಗುತ್ತವೆ. ಆಸುಪಾಸಿನಲ್ಲಿ ಸಿಸಿಟಿವಿ ಅಳವಡಿಸದ ಕಾರಣ ವನಜಾ ಶೆಡ್ತಿ ಅವರು ಯಾವ ದಿಕ್ಕಿಗೆ ಹೋಗಿದ್ದಾರೆ ಎಂಬ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.

ಜಯರಾಮ ಶೆಟ್ಟಿ ಖುದ್ದು ಎರಡು ಬಾರಿ ಉಡುಪಿ ಎಸ್ಪಿ ಅವರನ್ನು ಭೇಟಿ ಮಾಡಿ ತಾಯಿ ಪತ್ತೆಗೆ ಮನವಿ ಮಾಡಿದ್ದಾರೆ. ಆದರೆ, ಇದುವರೆಗೆ ವನಜಾ ಶೆಡ್ತಿಯವರ ಕುರುಹು ಪತ್ತೆಯಾಗಿಲ್ಲ. ಸಾರ್ವಜನಿಕರು ತಮ್ಮ ತಾಯಿಯನ್ನು ಎಲ್ಲಾದರೂ ಕಂಡಲ್ಲಿ ಅಥವಾ ಅವರ ಬಗ್ಗೆ ಮಾಹಿತಿ ಇದ್ದಲ್ಲಿ 8310013257 ಗೆ ಕರೆ ಮಾಡುವಂತೆ ಜಯರಾಮ್ ಶೆಟ್ಟಿ ವಿನಂತಿಸಿದ್ದಾರೆ.