ವೆಬ್ ಸೀರೀಸ್ ಸಾಕು, ಸಿನಿಮಾ ಬೇಡ, ಮಿಸ್ ವರ್ಲ್ಡ್ ಕಿರೀಟ ಬೇಕು: ಮಿಸ್ ಇಂಡಿಯಾ ಸಿನಿ ಶೆಟ್ಟಿ

ಉಡುಪಿ: ಮಿಸ್‌ ಇಂಡಿಯಾ ಆಗಿ ಆಯ್ಕೆಯಾದ ನಂತರ ಸೋಮವಾರ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಸಿನಿ ಶೆಟ್ಟಿ ಅವರನ್ನು ಬಂಟರ ಸಂಘದ ವತಿಯಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಚೆಂಡೆ, ಕೊಂಬು, ವಾದ್ಯಘೋಷಗಳೊಂದಿಗೆ ಮೆರವಣಿಗೆಯೊಂದಿಗೆ ಸ್ವಾಗತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿನಿ ಶೆಟ್ಟಿ, ವೆಬ್‌ ಸೀರೀಸ್‌ಗಳಲ್ಲಿ ನಟಿಸಿರುವುದರಿಂದ ನಟನೆಯ ಅನುಭವ ಇದೆ. ಸದ್ಯ ಸಿನಿಮಾದಲ್ಲಿ ನಟಿಸುವ ಗುರಿ ಇಲ್ಲ. ನನ್ನ ಮುಂದಿನ ಕನಸು ಮಿಸ್ ವರ್ಲ್ಡ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವುದು ಎಂದಿದ್ದಾರೆ.

ತುಳು ನನ್ನ ಮಾತೃ ಭಾಷೆ, ತುಳುವಿನಲ್ಲಿ ಒಳ್ಳೆಯ ಸಿನಿಮಾದ ಅವಕಾಶ ಬಂದಲ್ಲಿ ನಟಿಸಲಿಕ್ಕೆ ಸಿದ್ಧ. ನನಗೆ ಬಾಲ್ಯದಿಂದಲೂ ಅಜ್ಜಿ ಎಲ್ಲ ರೀತಿಯಲ್ಲಿ ಬೆಂಬಲವಾಗಿದ್ದರು. ನಾನು ಎಲ್ಲಿಗೆ ಹೋದರೂ ಯಾವುದೇ ಉಡುಗೆ ತೊಟ್ಟರೂ ಅಜ್ಜಿ ನನ್ನನ್ನು ಪ್ರೋತ್ಸಾಹಿಸುತಿದ್ದರು. ಅವರ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಮನೆಗೆ ಹೋಗಿ ಅಜ್ಜಿಯ ಜೊತೆ ಕುಳಿತು ತುಂಬಾ ಮಾತನಾಡಬೇಕು. ಎಲ್ಲರ ಆಶೀರ್ವಾದದಿಂದ ನಾನು ಈ ಸಾಧನೆ ಮಾಡಿದ್ದೇನೆ, ಎಲ್ಲರಿಗೂ ಧನ್ಯವಾದಗಳು. ಈಗಾಗಲೇ ನಾನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದೆಯೂ ಅನೇಕ ಸಾಮಾಜಿಕ ಕಾರ್ಯ ಮಾಡುವ ಆಸೆ ಇದೆ. ಅದನ್ನೆಲ್ಲಾ ಮುಂದೆ ನನ್ನ ಮಿಸ್‌ ಇಂಡಿಯಾ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಹೇಳುತ್ತೇನೆ. ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಗೆದ್ದ ಬಳಿಕ ಪುನಃ ಉಡುಪಿಗೆ ಬರುತ್ತೇನೆ ಎಂದರು.

ಮೂಲತಃ ಇಲ್ಲಿನ ಬೆಳ್ಳಂಪಳ್ಳಿಯವರಾದ, ಮುಂಬೈಯ ಸಿನಿ ಶೆಟ್ಟಿ ಅವರನ್ನು ಮಂಗಳವಾರ ಬಂಟರ ಯಾನೆ ನಾಡವರ ಸಂಘದಿಂದ ಅಭಿನಂದಿಸಲಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಅಧ್ಯಕ್ಷತೆ ವಹಿಸಿದ್ದರು. 100ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಸಂಘದಿಂದ ಬಂಟರ ವಿಶ್ವಕೋಶ ತಯಾರಿಸಲಾಗುತ್ತಿದ್ದು, ಸಿನಿ ಶೆಟ್ಟಿಇದಕ್ಕೆ ಬ್ರಾಂಡ್‌ ಅಂಬಾಸಿಡರ್‌ ಆಗಬೇಕು ಎಂದು ಆಶಿಸಿದರು. ಉದ್ಯಮಿ ಗುರ್ಮೆ ಸುರೇಶ್‌ ಶೆಟ್ಟಿ, ಸಿನಿ ಶೆಟ್ಟಿತಂದೆ ಸದಾನಂದ ಶೆಟ್ಟಿ, ತಾಯಿ ಹೇಮಾ ಶೆಟ್ಟಿ, ಅಭಿನಂದನಾ ಸಮಿತಿ ಸಂಚಾಲಕ ಜಯರಾಜ್‌ ಹೆಗ್ಡೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.