ಉದಯ್‌ಪುರ ಟೈಲರ್ ಹತ್ಯೆ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲು ಗೃಹ ಸಚಿವಾಲಯದ ನಿರ್ದೇಶನ

ಉದಯಪುರ: ಉದಯಪುರದಲ್ಲಿ ಟೈಲರ್ ಆಗಿದ್ದ ಕನ್ಹಯ್ಯಾ ಲಾಲ್ ನ ಭೀಕರ ಹತ್ಯೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಆಗಿದ್ದ ಕನ್ಹಯ್ಯಾ ಲಾಲ್ ನೂಪುರ್ ಶರ್ಮಾರ ವಿವಾದಾತ್ಮಕ ಹೇಳಿಕೆಗಳನ್ನು ಬೆಂಬಲಿಸಿದ್ದಕ್ಕಾಗಿ ಇಬ್ಬರು ಮುಸ್ಲಿಂ ವ್ಯಕ್ತಿಗಳು ಮಂಗಳವಾರದಂದು ಅಂಗಡಿಯಲ್ಲಿದ್ದ ಕನ್ಹಯ್ಯಾನ ಶಿರಚ್ಛೇದ ಮಾಡಿದ್ದಲ್ಲದೆ ಈ ಬಗ್ಗೆ ವೀಡಿಯೋ ಮಾದಿ ಹರಿಬಿಟ್ಟು, ದೇಶದ ಪ್ರಧಾನಿ ಮೋದಿಗೂ ಇದೇ ಗತಿ ಕಾಣಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ರಿಯಾಜ್ ಅಖ್ತರ್ ಮತ್ತು ಘೋಸ್ ಮೊಹಮ್ಮದ್ ತಮ್ಮ ಭೀಬತ್ಸ ಕೃತ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದು, ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಅವರನ್ನು ಬಂಧಿಸಲಾಗಿದೆ. ಕನ್ಹಯ್ಯಾ ಲಾಲ್ ಅವರ ಪಾರ್ಥಿವ ಶರೀರವು ಉದಯಪುರದ ಅವರ ಹುಟ್ಟೂರಿಗೆ ತಲುಪಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ವಕ್ತಾರರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ, “ರಾಜಸ್ಥಾನದ ಉದಯಪುರದಲ್ಲಿ ನಿನ್ನೆ ನಡೆದ ಕನ್ಹಯ್ಯಾ ಲಾಲ್ ತೇಲಿಯ ಕ್ರೂರ ಹತ್ಯೆಯ ತನಿಖೆಯನ್ನು ವಹಿಸಿಕೊಳ್ಳುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ನಿರ್ದೇಶಿಸಲಾಗಿದೆ. ಯಾವುದೇ ಸಂಸ್ಥೆಯ ಒಳಗೊಳ್ಳುವಿಕೆ ಮತ್ತು ಅಂತರಾಷ್ಟ್ರೀಯ ಲಿಂಕ್‌ಗಳನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುತ್ತದೆ” ಎಂದಿದೆ.