ವಿದ್ಯುತ್ ಬಿಲ್ ನಲ್ಲಿ ಅಕ್ರಮ: ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿದ ಸಚಿವ ಸುನಿಲ್ ಕುಮಾರ್

ಬೆಂಗಳೂರು: ನಕಲಿ ವಿದ್ಯುತ್ ಬಿಲ್ ಸೃಷ್ಟಿಸಿ ಬೆಸ್ಕಾಂಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದ ಆರೋಪದಡಿ ಮೂವರು ಸಿಬ್ಬಂದಿಯನ್ನು ಇಂಧನ ಸಚಿವ ಸುನಿಲ್ ಕುಮಾರ್ ಅವರು ಅಮಾನತುಗೊಳಿಸಿದ್ದಾರೆ.

ಅಮಾನತುಗೊಂಡ ಸಿಬ್ಬಂದಿಯನ್ನು ಮುಳಬಾಗಿಲು ಉಪವಿಭಾಗದ ಕಿರಿಯ ಸಹಾಯಕ ಮೆಹಬೂಬ್ ಪಾಷ, ಕಿರಿಯ ಸಹಾಯಕಿ ಗಾಯತ್ರಮ್ಮ ಹಾಗೂ ಕಿರಿಯ ಸಹಾಯಕಿ ಸುಜಾತಮ್ಮ ಎಂದು ಗುರುತಿಸಲಾಗಿದೆ.

ಇವರು ಗ್ರಾಹಕರಿಗೆ ವಿದ್ಯುತ್ ಬಿಲ್ ವಿತರಿಸುವ ವೇಳೆಯಲ್ಲಿ ಕೆಲವು ಬಿಲ್ ಗಳನ್ನು ಮಾರ್ಪಾಟುಗೊಳಿಸಿ, ಅದರ ಮೊತ್ತವನ್ನು ಕಡಿಮೆಗೊಳಿಸುತ್ತಿದ್ದರು. ಆ ಮೂಲಕ ಬೆಸ್ಕಾಂಗೆ ಬರಬೇಕಿದ್ದ ಆದಾಯದಲ್ಲಿ ನಷ್ಟ ಉಂಟು ಮಾಡುತ್ತಿದ್ದರು. ಆರೋಪಿಗಳ ಕೃತ್ಯ ಸಾವೀತಾಗಿರುವ ಹಿನ್ನೆಲೆಯಲ್ಲಿ ಮೂವರನ್ನು ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಅಲ್ಲದೆ, ಮೂವರ ಮೇಲೂ ಕೋಲಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಇಲಾಖೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಅಕ್ರಮ ಎಸಗುವ ಅಧಿಕಾರಿ, ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಚಿವರು ಎಚ್ಚರಿಕೆ ನೀಡಿದ್ದಾರೆ.