ಹಿಂದೂ ಪದವನ್ನು ಕೀಳಾಗಿ ಟೀಕಿಸಿದ ಸತೀಶ್ ಜಾರಕಿಹೊಳಿ ಪರವಾಗಿ ಕಾಂಗ್ರೆಸ್ ದೇಶದ ಕ್ಷಮೆಯಾಚಿಸಬೇಕು: ಸಚಿವ ಸುನಿಲ್ ಕುಮಾರ್

ಬೆಂಗಳೂರು: ಬೆಳಗಾವಿಯ ನಿಪ್ಪಾಣಿ ಪಟ್ಟಣದಲ್ಲಿ ಭಾನುವಾರ ರಾತ್ರಿ ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ‘ಹಿಂದೂ’ ಎಂಬ ಪದವು ಪರ್ಷಿಯನ್ ಪದವಾಗಿದ್ದು, ಅದರ ಅರ್ಥ “ತುಂಬಾ ಕೊಳಕು” ಎಂದು ಹೇಳುವ ಮೂಲಕ ವಿವಾದವನ್ನು ಎಬ್ಬಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಇಂಧನ ಸಚಿವ ವಿ ಸುನಿಲ್ ಕುಮಾರ್ ಸರಣಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿ  ಪ್ರತಿಕ್ರಿಯಿಸಿರುವ ಸುನಿಲ್ ಕುಮಾರ್, ನನ್ನನ್ನು ಹಿಂದು ಎಂದು ಕರೆಯಬೇಡಿ ಎಂದು ಹೇಳಿದ್ದ ನೆಹರು ಅವರ ಹಾದಿಯಲ್ಲಿಯೇ ಕಾಂಗ್ರೆಸ್ ಇಷ್ಟು ವರ್ಷದಿಂದ ಸಾಗುತ್ತಿದೆ. ಹಿಂದೂ ಧರ್ಮ,ಹಿಂದೂಗಳು,ಹಿಂದುತ್ವ ಹಾಗೂ ಹಿಂದುತ್ವ ರಾಷ್ಟ್ರೀಯ ವಿಚಾರಧಾರೆಯನ್ನು ಅವಕಾಶ ಸಿಕ್ಕಾಗ ಹತ್ತಿಕ್ಕಲು ಯತ್ನಿಸಿದೆ. ಸತೀಶ್ ಜಾರಕಿಹೊಳಿಯವರ ಹೇಳಿಕೆ ಈ ಪರಂಪರೆಯ ಮುಂದುವರೆದ ಭಾಗವಾಗಿದೆ ಎಂದಿದ್ದಾರೆ.

ಸತೀಶ್ ಜಾರಕಿಹೊಳಿಯವರಿಗೆ ಹಿಂದೂ ಶಬ್ದ ಅಶ್ಲೀಲ, ಸಿದ್ದರಾಮಯ್ಯರಿಗೆ ಕೇಸರಿ-ತಿಲಕ ಕಂಡರೆ ಭಯ, ದೈವಾರಾಧನೆ ಹಾಗೂ ತೀರ್ಥ ಬಿಟಿ ಲಲಿತಾ ನೈಕ್ ರಿಗೆ ವಾಕರಿಕೆ ತರಿಸಿದರೇ, ಡಿಕೆ ಶಿವಕುಮಾರ್ ರವರಿಗೆ ಮುಸ್ಲಿಮರು ಸೋದರರು, ಎಂ.ಬಿ ಪಾಟೀಲ್ ರವರಿಗೆ ಹಿಂದು ಧರ್ಮದ ಅಖಂಡತೆ ಒಡೆಯುವ ಯೋಚನೆ. ಇದು ಕಾಂಗ್ರೆಸ್ ನಾಯಕರ ಒಳಮನಸ್ಸಿನ ಹಿಂದು ವಿರೋಧಿ ನಿಲುವನ್ನು ಸೂಚಿಸುತ್ತದೆ.

ಭಾರತ್ ಜೋಡೊ ಯಾತ್ರೆ ಹೆಸರಿನಲ್ಲಿ ರಾಹುಲ್ ಗಾಂಧಿ ನಡೆಸಿದ ಪಾದಯಾತ್ರೆ ಬಳಿಕ, ಕಾಂಗ್ರೆಸ್ ನಾಯಕರ ಹಿಂದೂ ವಿರೋಧಿ ಹೇಳಿಕೆಗಳು ಮಿತಿ ಮೀರಿವೆ. ಕಾಂಗ್ರೆಸ್ ನಡೆಸುವ ಎಲ್ಲಾ ಯಾತ್ರೆಗಳ ಹಿಂದಿನ ಉದ್ದೇಶ ಹಿಂದೂ ದ್ವೇಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ಅಧಿನಾಯಕರ ಒಳಮನಸ್ಸಿನ ಭಾವನೆಗಳಿಗೆ ಸತೀಶ್ ಜಾರಕಿಹೊಳಿ ಮಾತಿನ ರೂಪ ನೀಡಿದ್ದಾರೆ.

ಹಿಂದುತ್ವ ಎಂಬ ಜೀವನ ಪದ್ದತಿಯನ್ನು ಕೀಳಾಗಿ ಟೀಕಿಸಿದ ಸತೀಶ್ ಜಾರಕಿಹೊಳಿ ಪರವಾಗಿ ಸಂಪೂರ್ಣ ಕಾಂಗ್ರೆಸ್ ದೇಶದ ಕ್ಷಮೆಯಾಚಿಸಬೇಕು. ಇದು ವೈಯುಕ್ತಿಕ ಅಭಿಪ್ರಾಯ ಎಂದು ಕೈ ತೊಳೆದುಕೊಳ್ಳುವ ಸುರ್ಜೆವಾಲಾರವರ ನಾಟಕವನ್ನು ಹಿಂದುಗಳು ಒಪ್ಪುವುದಿಲ್ಲ. ಭಾರತೀಯತೆಗೆ ಅಪಮಾನ ಮಾಡಿರುವ ನಿಮ್ಮ ನಾಟಕಕ್ಕೆ ಎಂದಿಗೂ ಕ್ಷಮೆ ಇಲ್ಲ ಎಂದು ಸಚಿವ ಸುನಿಲ್ ಕುಮಾರ್ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.