ಬೆಂಗಳೂರು: ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಸೌಹಾರ್ದಯುತ ಚರ್ಚೆ ನಡೆಸಿದ್ದಾರೆ.
ಮಾರ್ಚ್ 10ರಿಂದ 20ರ ವರೆಗೆ ನಡೆಯಲಿರುವ ಕಾರ್ಕಳ ಉತ್ಸವಕ್ಕೆ ರಾಜ್ಯಪಾಲರನ್ನು ಆಹ್ವಾನಿಸಿರುವ ಅವರು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸುವುದರ ಜತೆಗೆ ಉತ್ಸವದ ವೈಶಿಷ್ಟ್ಯಗಳನ್ನು ವಿವರಿಸಿದ್ದಾರೆ.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ಮಾರ್ಚ್ 10ರಿಂದ 20ರ ವರೆಗೆ ಕಾರ್ಕಳ ಉತ್ಸವ ಆಯೋಜಿಸಲಾಗಿದೆ. ತುಳು ನಾಡಿನ ಸಾಂಸ್ಕ್ರತಿಕ ಬದುಕಿನ ಅನಾವರಣದ ಜತೆಗೆ ಕೋವಿಡ್ ನಿಂದ ಏಕತಾನತೆಗೆ ಸಿಲುಕಿದ್ದ ತಾಲೂಕಿನ ಜನ ಜೀವನಕ್ಕೆ ಉತ್ಸಾಹ ಹಂಚುವ ಉದ್ದೇಶವನ್ನು ಉತ್ಸವ ಹೊಂದಿದೆ.
ಉತ್ಸವ ಕಾರ್ಕಳದಲ್ಲಿ ನಡೆಯುತ್ತಿದ್ದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈಗಾಗಲೇ ಸದ್ದು ಮಾಡುತ್ತಿದೆ. ತುಳುನಾಡಿನ ಸಾಂಸ್ಕ್ರತಿಕ ವೈಭವ ಉತ್ಸವದ ಜೀವಾಳವಾಗಿದೆ.
ಈ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯ ಭರದಿಂದ ನಡೆಯುತ್ತಿದ್ದು, ಗಣ್ಯಾತಿಗಣ್ಯರು, ಅನಿವಾಸಿ ಕಾರ್ಕಳ ಜನರು ಸೇರಿದಂತೆ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ.