ಸ್ವಾತಂತ್ರ್ಯವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಕುರಿತು ಪೂರ್ವಾಭಾವಿ ಸಭೆ

ಮಂಗಳೂರು: ಇಲ್ಲಿನ ಬಾವುಟ ಗುಡ್ಡೆಯಲ್ಲಿ ನಿರ್ಮಾಣವಾಗಿರುವ ಸ್ವಾತಂತ್ರ್ಯ ಸಮರವೀರ, ಸಂಘಟನಾ ಚತುರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಕುರಿತು ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಪ್ರಮುಖರೊಂದಿಗೆ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಬಗ್ಗೆ ಸಚಿವ ಸುನಿಲ್ ಕುಮಾರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ತುಳುನಾಡಿನ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಮರ ಸುಳ್ಯ ಕ್ರಾಂತಿಯ ರೂವಾರಿ ಸ್ವಾತಂತ್ರ್ಯ ವೀರ ಕೆಂದಂಬಾಡಿ ರಾಮಯ್ಯ ಗೌಡರ ಪ್ರತಿಮೆಯು 11 ಅಡಿ ಎತ್ತರವಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಪ್ರತಿಮೆಯನ್ನು ರಚಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ 30 ಲಕ್ಷ ರೂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 10 ಲಕ್ಷ ರೂ. ಸೇರಿದಂತೆ ಒಟ್ಟು 40 ಲಕ್ಷ ರೂ. ವೆಚ್ಚದಲ್ಲಿ ಪ್ರತಿಮೆ ನಿರ್ಮಾಣವಾಗಿದೆ.