ಏರುತ್ತಿರುವ ತಾಪಮಾನ: ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಬದಲಾವಣೆ ಇಲ್ಲವೆಂದ ಶಿಕ್ಷಣ ಸಚಿವ

ಬೆಂಗಳೂರು: ಕರ್ನಾಟಕದ ಕೆಲವು ಭಾಗಗಳಲ್ಲಿ ತಾಪಮಾನವು ದಿನೇ ದಿನೇ ಏರುತ್ತಿದ್ದು, ಅದಾಗ್ಯೂ ಶಾಲೆಗಳ ಮತ್ತು ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿಯ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಗುರುವಾರ ಹೇಳಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಹೆಚ್ಚುತ್ತಿರುವ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು ಶೈಕ್ಷಣಿಕ ವರ್ಷದ ಆರಂಭವನ್ನು ಮುಂದೂಡುವ ಬಗ್ಗೆ ಪರಿಗಣಿಸುವಂತೆ ವಿಧಾನ ಪರಿಷತ್ತಿನ ಕೆಲವು ಸದಸ್ಯರು ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಕೋರಿದ್ದಾರೆ.

“ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ,” ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ ನಾಗೇಶ್, ”2022-23ನೇ ಸಾಲಿನ ತರಗತಿಗಳು ಮೇ 16 ರಂದು ವೇಳಾಪಟ್ಟಿಯಂತೆ ಪ್ರಾರಂಭವಾಗುತ್ತವೆ, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದರು.

“ಶೈಕ್ಷಣಿಕ ವರ್ಷ ಆರಂಭಕ್ಕೆ ವಿಳಂಬ ಮಾಡುವಂತೆ ಸರಕಾರಕ್ಕೆ ಯಾವುದೇ ಮನವಿ ಬಂದಿಲ್ಲ. ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ ಯಾವುದೇ ಮುನ್ಸೂಚನೆ ನೀಡಿಲ್ಲ. ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಪರಿಷ್ಕರಿಸುವ ನಿರ್ಧಾರವನ್ನು ಅಂತಹ ಯಾವುದೇ ಮುನ್ಸೂಚನೆ ಇರುವ ತಾಲೂಕುಗಳು ತೆಗೆದುಕೊಳ್ಳಬಹುದು, ”ಎಂದು ಅವರು ಹೇಳಿದರು.

ಕೋವಿಡ್ ಕಾಲದಲ್ಲಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾದ್ದರಿಂದ ಈ ಬಾರಿ ಜೂನ್ 1 ರ ಬದಲಿಗೆ ಮೇ 15 ರಂದೇ ಶಾಲೆಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ.