ಮಣಿಪಾಲ: ಮುಂಬೈನಿಂದ ಉಡುಪಿಗೆ ರೈಲಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರ ಬಳಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಾಪು ತಾಲೂಕಿನ ಶಿರ್ವ ಗ್ರಾಮದ ಬಂಟಕಲ್ ನಿವಾಸಿ ತುಕಾರಾಂ ಭಟ್ ಅವರು ಪತ್ನಿ ಮತ್ತು ಮಗಳೊಂದಿಗೆ ಜುಲೈ 10 ರಂದು ರಾತ್ರಿ 10.45ರ ಸುಮಾರಿಗೆ ಮುಂಬೈನ ಥಾಣೆ ರೈಲ್ವೇ ಸ್ಟೇಷನ್ ನಿಂದ ಉಡುಪಿಗೆ ರೈಲಿನಲ್ಲಿ ಹೊರಟಿದ್ದರು.
ತುಕಾರಾಂ ಅವರ ಪತ್ನಿ ಹಾಗೂ ಮಗಳು ತಮ್ಮಲ್ಲಿದ್ದ ಚಿನ್ನಾಭರಣಗಳನ್ನು ಬ್ಯಾಗ್ ನಲ್ಲಿ ಹಾಕಿ ಬಟ್ಟೆಯ ಮಧ್ಯೆ ಇಟ್ಟಿದ್ದರು. ರೈಲಿನಲ್ಲಿ ಆ ಬ್ಯಾಗ್ ಅನ್ನು ರೈಲ್ವೇ ಸೀಟ್ ನ ಅಡಿಯಲ್ಲಿ ಇಟ್ಟು ಪ್ರಯಾಣಿಸುತ್ತಿದ್ದರು. ಪಕ್ಕದ ಸೀಟ್ ನಲ್ಲಿ ಇನ್ನಿಬ್ಬರು ವ್ಯಕ್ತಿಗಳು ಇವರೊಂದಿಗೆ ಪ್ರಯಾಣಿಸುತ್ತಿದ್ದರು. ರೈಲು ಕುಮಟಾ ಸಮೀಪಿಸುತ್ತಿದ್ದಂತೆ ಜೋರಾಗಿ ಮಳೆ ಸುರಿಯಲು ಆರಂಭಿಸಿದ್ದು, ಈ ವೇಳೆ ಪಕ್ಕದ ಸೀಟ್ ನಲ್ಲಿದ್ದ ವ್ಯಕ್ತಿಯು ನಿಮ್ಮ ಬ್ಯಾಗ್ ಗೆ ಮಳೆ ನೀರು ಬೀಳುತ್ತದೆ. ಅದನ್ನು ಮೇಲೆ ಇಡುವುದಾ ಎಂದು ಕೇಳಿದ್ದಾನೆ. ಅದಕ್ಕೆ ತುಕಾರಾಂ ಅವರು ಆಯ್ತು ಇಟ್ಟುಬಿಡಿ ಎಂದು ಹೇಳಿದ್ದಾರೆ.
ಆ ಬಳಿಕ ಪಕ್ಕದ ಸೀಟ್ ನಲ್ಲಿ ಇನ್ನೊಬ್ಬ ವ್ಯಕ್ತಿ ಇಳಿದು ಹೋಗಿದ್ದು, ನಂತರ ಬ್ಯಾಗ್ ಮೇಲಿಟ್ಟಿದ್ದ ವ್ಯಕ್ತಿಯೂ ಭಟ್ಕಳ ಸ್ಟೇಷನ್ ನಲ್ಲಿ ಇಳಿದುಕೊಂಡಿದ್ದನು. ಆತ ಇಳಿದು ಹೋದ ಬಳಿಕ ಸಂಶಯಗೊಂಡ ತುಕಾರಾಂ ಬ್ಯಾಗ್ ಪರಿಶೀಲಿಸಿದ್ದಾರೆ. ಆಗ ಬ್ಯಾಗ್ ನಲ್ಲಿದ್ದ ಒಟ್ಟು ₹6,76,000 ಮೌಲ್ಯದ 169 ಗ್ರಾಂ ಚಿನ್ನದ ಆಭರಣಗಳು ಕಳವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.