ಬೆಂಗಳೂರು: ನಿನ್ನೆ ತೆರೆ ಕಾಣಬೇಕಿದ್ದ ನಟ ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷಿತ ಚಿತ್ರ ಕೋಟಿಗೊಬ್ಬ-3 ಸಿನಿಮಾ ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿತ್ತು. ಆದರೆ ಇಂದು ಕೋಟಿಗೊಬ್ಬ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ.
ನಿನ್ನೆ ತೆರೆ ಕಾಣಬೇಕಿದ್ದ ಸಿನಿಮಾ
ಇನ್ನು ಇಂದು ಹೊಸ ವಿತರಕರೊಂದಿಗೆ ಸಿನಿಮಾ ರಿಲೀಸ್ ಆಗಿದೆ. ಬಿಕೆಟಿ; ಎಂಎಂಸಿಎಚ್; ಚಿತ್ರದುರ್ಗ; ಬಳ್ಳಾರಿ- ಬಿಕೆ ಗಂಗಾಧರ್ ಮತ್ತು ಜಾಕ್ ಮಂಜು ಹಾಗೂ ಬಿಕೆಟಿ -ಸೈಯದ್ ಸಲಾಮ್ನ ಮಲ್ಟಿಪ್ಲೆಕ್ಸ್ಗಳು ಸಿನಿಮಾ ವಿತರಣೆ ಮಾಡಲಿದೆ ಎಂದು ಸುದೀಪ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಫ್ಯಾನ್ಸ್ ಶೋ ರದ್ದು
ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ನಿನ್ನೆಯ ಎಲ್ಲಾ ಪ್ರದರ್ಶನಗಳು ರದ್ದುಗೊಂಡಿದ್ದವು. ಆದರೆ ಇವತ್ತು ಕೂಡ ಅಭಿನಯ ಚಕ್ರವರ್ತಿಯ ಫ್ಯಾನ್ಸ್ಗಳಿಗೆ ನಿರಾಶೆಯುಂಟಾಗಿದ್ದು ಪ್ರಸನ್ನ ಚಿತ್ರಮಂದಿರದಲ್ಲಿ ಇವತ್ತಿನ ಫ್ಯಾನ್ಸ್ ಶೋ ರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇವತ್ತು ಬೆಳಗ್ಗೆ 6 ಗಂಟೆಗೆ ಫ್ಯಾನ್ಸ್ ಶೋ ಶುರುವಾಗಲಿವೆ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದರು. ಆದರೆ ಚಿತ್ರಮಂದಿರದಲ್ಲಿ ಫ್ಯಾನ್ಸ್ ಶೋ ರದ್ದಾಗಿದೆ ಎಂಬ ಬೋರ್ಡ್ ಹಾಕಲಾಗಿದ್ದು ಅಭಿಮಾನಿಗಳಿಗೆ ತೀವ್ರ ನಿರಾಸೆಯುಂಟಾಗಿದೆ.