ಪಡುಬಿದ್ರೆ: ಬಿಸ್ಕೆಟ್ ಕೊಡುವ ನೆಪದಲ್ಲಿ ಐದು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಮುಫಿಜುಲ್ ಶೇಖ್ (26) ಎಂಬಾತನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.
ಪಡುಬಿದ್ರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಮುಫಿಜುಲ್ ಕೆಲಸ ಮಾಡುತ್ತಿದ್ದ. ಸಂತ್ರಸ್ತ ಬಾಲಕಿಯ ಪೋಷಕರು ಕೂಡ ಇದೇ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ಇವರು ಕೂಡ ಮುರ್ಷಿದಾಬಾದ್ ಮೂಲದವರಾಗಿದ್ದಾರೆ. ಜುಲೈ 26 ರಂದು ಮಧ್ಯಾಹ್ನ, ಮುಫಿಜುಲ್ ಬಿಸ್ಕತ್ತು ಕೊಡುವುದಾಗಿ ಬಾಲಕಿಯ ಪೋಷಕರಿಗೆ ಹೇಳಿ ಆಕೆಯನ್ನು ತನ್ನ ಕೋಣೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ತನ್ನ ಕೋಣೆಗೆ ಮರಳಿದ ನಂತರ ಹುಡುಗಿ ಹೊಟ್ಟೆ ನೋವೆಂದು ಅಳುತ್ತಿದ್ದುದನ್ನು ಕಂಡು ಆಕೆಯ ಪೋಷಕರು ಆಕೆಯನ್ನು ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಬಾಲಕಿಯ ದೈಹಿಕ ಪರೀಕ್ಷೆ ನಡೆಸಿದ ವೈದ್ಯರು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಶಂಕೆ ವ್ಯಕ್ತಪಡಿಸಿದ್ದಾರೆ.
ನಂತರ ಪಡುಬಿದ್ರಿ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಪೇದೆಗಳ ಬೆಂಗಾವಲಿನಲ್ಲಿ ಬಾಲಕಿಯನ್ನು ಮಹಿಳೆ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯ ವೈದ್ಯರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ದೃಢಪಡಿಸಿದ್ದಾರೆ.
ಆರೋಪಿ ಮುಫಿಜುಲ್‌ನನ್ನು ಪೊಲೀಸರು ತಕ್ಷಣ ಬಂಧಿಸಿದ್ದಾರೆ. ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪೂವಯ್ಯ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.