ಮಹಿಳೆಯರು ಸ್ವಾವಲಂಬಿಗಳಾಗಲು ಇಲ್ಲಿದೆ ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ

ಉಡುಪಿ : 2019-20 ನೇ ಸಾಲಿನಲ್ಲಿ ಭೋವಿ ಅಭಿವೃದ್ಧಿ ನಿಗಮದಿಂದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರಣ ಉದ್ದೇಶಕ್ಕಾಗಿ ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಕನಿಷ್ಟ 10 ಪರಿಶಿಷ್ಟ ಜಾತಿ ಸದಸ್ಯರಿರುವ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಾಮೂಹಿಕ ಉತ್ಪಾದನಾ / ಸೇವಾ ಘಟಕಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಜಂಟಿ ಖಾತೆಯನ್ನು ಆರಂಭಿಸಿ ಉತ್ತಮ ಆದಾಯ ಗಳಿಸುವ, ಉತ್ಪಾದನಾ / ಸೇವಾ ಘಟಕ ಆರಂಭಿಸಲು 2.50 ಲಕ್ಷ ರೂ. ಸಹಾಯಧನವನ್ನು ಮಂಜೂರು ಮಾಡಲಾಗುತ್ತದೆ. ಪ್ರತಿ ಸದಸ್ಯರಿಗೆ 25000 ರೂ. ದಂತೆ ಹಣವನ್ನು ನಿಗಮ ಭರಿಸುತ್ತದೆ.(15000 ರೂ. ಸಹಾಯಧನ ಮತ್ತು 10000 ರೂ. ಬೀಜಧನ ಸಾಲ).

ಸ್ವ-ಸಹಾಯ ಸಂಘವು ನೋಂದಣಿಯಾಗಿರಬೇಕು ಹಾಗೂ ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿರಬಾರದು. ಅರ್ಜಿದಾರರು ಉಚಿತ ಅರ್ಜಿ ನಮೂನೆಯನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ರಜತಾದ್ರಿ, ಮಣಿಪಾಲ ಇಲ್ಲಿಂದ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2574884 ನ್ನು ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.