ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ CAPF ಕಾನ್ಸ್‌ಟೇಬಲ್ ಪರೀಕ್ಷೆ ನಡೆಸಲು ಕೇಂದ್ರ ಗೃಹ ಸಚಿವಾಲಯ ನಿರ್ಧಾರ

ನವದೆಹಲಿ: 2024 ಜ.1ರ ಬಳಿಕ ಕೇಂದ್ರ ಅರೆಸೇನಾ ಪಡೆಗಳು ಅಥವಾ CAPF ಗಳಲ್ಲಿ ಕಾನ್ಸ್‌ಟೇಬಲ್‌ಗಳ (ಜನರಲ್ ಡ್ಯೂಟಿ) ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ಗೆ ಹೆಚ್ಚುವರಿಯಾಗಿ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ನಿರ್ಧರಿಸಿದೆ.

CAPF ಗಳಲ್ಲಿ ಸ್ಥಳೀಯ ಯುವಕರ ಭಾಗವಹಿಸುವಿಕೆಗೆ ಉತ್ತೇಜನ ನೀಡಲು ಮತ್ತು ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪಕ್ರಮದಲ್ಲಿ ತೆಗೆದುಕೊಂಡ “ಹೆಗ್ಗುರುತಿನ” ನಿರ್ಧಾರ ಎಂದು ಸಚಿವಾಲಯ ಬಣ್ಣಿಸಿದೆ.

ಪ್ರಶ್ನೆ ಪತ್ರಿಕೆಗಳನ್ನು ಪ್ರಾದೇಶಿಕ ಭಾಷೆಗಳಾದ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಒಡಿಯಾ, ಉರ್ದು, ಪಂಜಾಬಿ, ಮಣಿಪುರಿ, ಕೊಂಕಣಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನೀಡಲಾಗುವುದು.

ಈ ನಿರ್ಧಾರವು ಲಕ್ಷಗಟ್ಟಲೆ ಆಕಾಂಕ್ಷಿಗಳು ತಮ್ಮ ಮಾತೃಭಾಷೆ/ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತದೆ ಮತ್ತು ಅವರ ಆಯ್ಕೆಯ ಭವಿಷ್ಯವನ್ನು ಸುಧಾರಿಸುತ್ತದೆ.

ಗೃಹಸಚಿವಾಲಯ ಮತ್ತು ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಬಹು ಭಾರತೀಯ ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸಲು ಅನುಕೂಲವಾಗುವಂತೆ ಅಸ್ತಿತ್ವದಲ್ಲಿರುವ ಎಂಒಯು (ತಿಳುವಳಿಕೆ ಪತ್ರ) ಅನುಬಂಧಕ್ಕೆ ಸಹಿ ಹಾಕಲಿದೆ ಎಂದು ಸಚಿವಾಲಯ ತಿಳಿಸಿದೆ.

ಕಾನ್ಸ್‌ಟೇಬಲ್ ಜಿಡಿ ಎಸ್‌ಎಸ್‌ಸಿ ನಡೆಸುವ ಪ್ರಮುಖ ಪರೀಕ್ಷೆಗಳಲ್ಲಿ ಒಂದಾಗಿದೆ, ಇದು ದೇಶಾದ್ಯಂತ ಲಕ್ಷಾಂತರ ಅಭ್ಯರ್ಥಿಗಳನ್ನು ಆಕರ್ಷಿಸುತ್ತದೆ.

ಅರೆಸೇನಾ ಪಡೆಗಳಲ್ಲಿ 84,000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಗಡಿ ಭದ್ರತಾ ಪಡೆ (BSF), ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್ (ITBP), ಸಶಸ್ತ್ರ ಸೀಮಾ ಬಾಲ್ (SSB) ಮತ್ತು ಅಸ್ಸಾಂ ರೈಫಲ್ಸ್ ಅರೆಸೇನಾ ಪಡೆಗಳಾಗಿವೆ.