ನೀವು ನಿಮ್ಮ ಹೆಂಡತಿ, ಮಗಳು, ಅಕ್ಕ- ತಂಗಿಯರ ಕುರಿತು ಕಾಳಜಿ ಇರುವ ಪುರುಷರಾಗಿದ್ದರೆ, ನಿಮ್ಮದೇ ಆರೋಗ್ಯ, ಪರಿಸರದ ಕುರಿತು ಕಾಳಜಿ ಹೊಂದಿರುವ ಮಹಿಳೆಯಾಗಿದ್ದರೆ ಒಮ್ಮೆ ಇಲ್ಲಿ ಗಮನಿಸಿ. ಮೆನ್ಸ್ಟ್ರುವಲ್ ಕಪ್ ಅಥವಾ ಮುಟ್ಟಿನ ಬಟ್ಟಲು ಅನ್ನೋ ಪದ ಒಮ್ಮೆಯಾದರೂ ನಿಮ್ಮ ಕಿವಿಗೆ ಬಿದ್ದಿರುತ್ತದೆ. ಮುಟ್ಟು ಅನ್ನೋ ಪದವನ್ನೇ ಹೇಳಲಿಕ್ಕೆ ಹಿಂಜರಿಯುವ ಹೆಣ್ಣುಮಕ್ಕಳು ಅಥವಾ ಇದು ನಮಗೆ ಸಂಬಂಧಿಸಿದ್ದಲ್ಲ ಅಂತ ಕಡೆಗಣಿಸುವ ಗಂಡುಮಕ್ಕಳು ಎಲ್ಲರೂ ಕೂಡಾ ಏನಿದು ಮುಟ್ಟಿನ ಬಟ್ಟಲು ಅಂತ ಯೋಚನೆ ಮಾಡೇ ಮಾಡಿರುತ್ತೀರಾ. ಹಾಗಾದ್ರೆ ಈ ಮುಟ್ಟಿನ ಬಟ್ಟಲಿನ ಬಗ್ಗೆ ತಿಳಿದುಕೊಳ್ಳುವ ನಿಮ್ಮ ಕುತೂಹಲವನ್ನು ತಿಳಿಸುತ್ತದೆ ಈ ಬರಹ. ಇದು ಉಡುಪಿXPRESS.COM ಕಾಳಜಿ
ಏನಿದು ಮೆನ್ಸ್ಟ್ರುವಲ್ ಕಪ್?
ಹೆಣ್ಣುಮಕ್ಕಳು ಮುಟ್ಟಿನ ರಕ್ತಸ್ರಾವವನ್ನು ತಡೆಯಲು ಹಿಂದಿನ ಕಾಲದಲ್ಲಿ ಹತ್ತಿಯ ಬಟ್ಟೆಗಳನ್ನು ಉಪಯೋಗಿಸುತ್ತಿದ್ದರು. ಅನಂತರದಲ್ಲಿ ಪ್ಯಾಡ್ ಗಳು, ಟ್ಯಾಂಪೂನ್ ಗಳು ಬಳಕೆಗೆ ಬಂದವು. ಈ ಎಲ್ಲವೂ ಕೂಡಾ ತಮ್ಮದೇ ಆದ ಒಂದಷ್ಟು ಮಿತಿಗಳನ್ನು ಹೊಂದಿವೆ. ಆದರೆ Menstrual Cup ಗಳು ಆರೋಗ್ಯಕ್ಕೂ, ಪರಿಸರಕ್ಕೂ, ನಿಮ್ಮ ಮನಸ್ಸಿನ ನೆಮ್ಮದಿಗೂ ಉಪಯುಕ್ತ. ಇದು U ಆಕಾರದಲ್ಲಿರುವ ಸಿಲಿಕಾನ್ ನಿಂದ ನಿರ್ಮಿಸಲ್ಪಟ್ಟಿರುವ ಕಪ್ ಆಗಿದ್ದು, 800-1000 ರೂ.ಗಳಿಗೆ ಸಿಗುತ್ತವೆ. ಹಾಗೂ ಒಂದು ಕಪ್ ಸುಮಾರು ಹತ್ತು ವರ್ಷಗಳವರೆಗೆ ಬಾಳಿಕೆ ಬರುತ್ತದೆ.

ಉಳಿತಾಯ ಮಾಡಬಹುದು
ಪ್ರತಿ ತಿಂಗಳು ಪ್ಯಾಡ್ ಗೆ ಕನಿಷ್ಟ 50-100 ರೂಪಾಯಿಗಳು ವ್ಯಯಿಸಬೇಕಾಗುತ್ತದೆ. ಅದೇ ಲೆಕ್ಕಾಚಾರದಲ್ಲಿ ಅಂದಾಜು ವರ್ಷಕ್ಕೆ 1000, ಹತ್ತು ವರ್ಷಕ್ಕೆ 10000 ಪ್ಯಾಡ್ ಖರೀದಿಗೆ ಖರ್ಚು ಮಾಡಬೇಕಾಗುತ್ತದೆ. Menstrual cup ಕೇವಲ 800-1000 ರೂ. ಆಗಿದ್ದು, 9000 ರೂ.ಗಳನ್ನು ಉಳಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲದೇ, ಹೆಣ್ಣು ಮಕ್ಕಳಿಂದ ಹಿಡಿದು, ಮದುವೆಯಾದವರು, ಮಕ್ಕಳಾದವರು ಎಲ್ಲರೂ ಇದನ್ನು ಬಳಸಬಹುದಾಗಿದೆ.
ಮೆಡಿಕಲ್ ಶಾಪ್ ಗಳಲ್ಲೂ Menstrual Cup ದೊರೆಯುತ್ತದೆ. ಹೆಚ್ಚಿನ ಆಯ್ಕೆ ಬೇಕಾದಲ್ಲಿ online ನಲ್ಲೂ ನೋಡಬಹುದು. ನಿಮ್ಮ ವಯಸ್ಸಿಗೆ ಅನುಗುಣವಾಗಿ ಬೇರೆ ಬೇರೆ ಗಾತ್ರಗಳಲ್ಲಿ ಕಪ್ ದೊರೆಯುತ್ತದೆ. ಹೇಗೆ ಉಪಯೋಗಿಸುವುದು ಎಂಬ ಬಗ್ಗೆ ಯೂಟ್ಯೂಬ್ ನಲ್ಲಿ ಹಲವು ವೀಡಿಯೋಗಳಿವೆ.

ತಿರುಗಾಟದ ಸಂದರ್ಭದಲ್ಲಿ, ನೀರಿನಲ್ಲಿ ಈಜುವ ಸಂದರ್ಭದಲ್ಲಿ, ಕ್ರೀಡಾಕೂಟ, ಡ್ಯಾನ್ಸ್ ಮುಂತಾದ ಸಂದರ್ಭಗಳಲ್ಲೂ ಚಿಂತಿಸುವ ಪ್ರಮೇಯವೇ ಇಲ್ಲ. ಸುಮಾರು 6-8 ಗಂಟೆಗಳವರೆಗೆ ಇದನ್ನು ಬದಲಿಸುವ ಅಗತ್ಯವೂ ಇಲ್ಲ.
ಹಾಗಾದ್ರೆ ಇನ್ಯಾಕೆ ತಡ ನೀವೂ ತರಿಸಿಕೊಳ್ಳಿ, ನಿಮ್ಮ ಪ್ರೀತಿ ಪಾತ್ರರಿಗೆ ಯಾವ್ಯಾವುದೋ ಅನುಪಯುಕ್ತ ಉಡುಗೊರೆ ಕೊಡುವ ಬದಲಿಗೆ ಪ್ರತಿತಿಂಗಳೂ ಬಳಕೆಗೆ ಬರುವ, ಆರೋಗ್ಯಕರ Menstrual cup ಉಡುಗೊರೆ ಕೊಡಬಹುದು.ಇದು ಉಡುಪಿXPRESS.COM ಕಾಳಜಿ












