30 ವರ್ಷ ಅಂದರೆ ಪುರುಷರಿಗೆ ತುಂಬಾ ಮಹತ್ವದ ವಯಸ್ಸು, ಈ ವಯಸ್ಸಿನಲ್ಲಿ ಹಲವಾರು ಮಾನಸಿಕ ಹಾಗೂ ದೈಹಿಕ ಬದಲಾವಣೆ ಪುರುಷರಲ್ಲಿ ಆಗುತ್ತದೆ. ಮೊದಲಿಗೆ ಅದು ಗಮನಕ್ಕೆ ಬರುವುದಿಲ್ಲ, ಆದರೆ ನಿಧಾನವಾಗಿ ದೇಹದಲ್ಲಿ ಶಕ್ತಿಯ ಮಟ್ಟ ಕಡಿಮೆಯಾಗುತ್ತದೆ, ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ ಮತ್ತು ರೋಗದ ಅಪಾಯ ಹೆಚ್ಚಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಈ ವಯಸ್ಸಿನಿಂದಲೇ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ ಅಕಾಲಿಕ ವಯಸ್ಸಾಗುವಿಕೆ, ತೂಕ ಹೆಚ್ಚಳ ಹಾಗೂ ಸ್ನಾಯು ಬಲ ಕುಗ್ಗುವಿಕೆ ಕಾಣಿಸಿಕೊಳ್ಳಬಹುದು.ಹಾಗಾದ್ರೆ 30 ಮತ್ತು 30 ರ ನಂತರ ಪುರುಷರು ಹೇಗಿರಬೇಕು? ಇಲ್ಲಿದೆ ಮಾಹಿತಿ
1. ಪ್ರೋಟೀನ್ ಹೆಚ್ಚಿಸಿ, ಕಾರ್ಬೋಹೈಡ್ರೇಟ್ ಕಡಿಮೆ ಮಾಡಿ:
ಸ್ನಾಯುಗಳ ಬಲ ಮತ್ತು ದ್ರವ್ಯರಾಶಿಯನ್ನು ಕಾಪಾಡಿಕೊಳ್ಳಲು ಪ್ರೋಟೀನ್ ಅಗತ್ಯ.ಮೊಟ್ಟೆ, ಕೋಳಿ, ಮೀನು, ಬೀಜಗಳು ಹಾಗೂ ದ್ವಿದಳ ಧಾನ್ಯಗಳನ್ನು ಆಹಾರದಲ್ಲಿ ನಿಯಮಿತವಾಗಿ ಸೇವಿಸಬಹುದು. ಸಂಸ್ಕರಿಸಿದ ಕಾರ್ಬೋಹೈಡ್ರೇಟುಗಳು ಮತ್ತು ಜಂಕ್ ಫುಡ್‌ಗಳನ್ನು ಕಡಿಮೆ ಮಾಡಿ — ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.
2. ಹಸಿರು ತರಕಾರಿಗಳು ಮತ್ತು ಹಣ್ಣುಗಳಿಗೆ ಆದ್ಯತೆ ನೀಡಿ
ವಯಸ್ಸಾದಂತೆ ದೇಹದಲ್ಲಿ “ಫ್ರೀ ರಾಡಿಕಲ್ಸ್” ಹೆಚ್ಚಾಗುತ್ತವೆ — ಇವು ಚರ್ಮದ ಯೌವ್ವನಕ್ಕೆ ಹಾನಿ ಮಾಡುತ್ತವೆ. ಪಾಲಕ್, ಬ್ರೊಕೊಲಿ, ಕ್ಯಾರೆಟ್‌ಗಳು ಮತ್ತು ಕಾಲೋಚಿತ ಹಣ್ಣುಗಳು ಉತ್ಕರ್ಷಣ ನಿರೋಧಕಗಳನ್ನು (Antioxidants) ಹೆಚ್ಚಿಸುತ್ತವೆ, ಚರ್ಮವನ್ನು ತಾಜಾ ಹಾಗೂ ಚೈತನ್ಯದಿಂದ ಇಡುತ್ತವೆ.
3. ನೀರು ಜಾಸ್ತಿ ಕುಡೀರಿ
30ರ ನಂತರ ದೇಹ ಬೇಗನೆ ನಿರ್ಜಲೀಕರಣಗೊಳ್ಳುತ್ತದೆ. ಪ್ರತಿದಿನ ಕನಿಷ್ಠ 8 ಗ್ಲಾಸ್ ನೀರು ಕುಡಿಯಿರಿ. ಇದು ಜೀರ್ಣಕ್ರಿಯೆ ಸುಧಾರಿಸಲು, ಚರ್ಮ ತೇವಾಂಶದಿಂದ ಇರಲು ಮತ್ತು ದೇಹದಿಂದ ವಿಷಕಾರಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

4. ಆರೋಗ್ಯಕರ ಕೊಬ್ಬುಗಳೂ ಬೇಕು:
ಎಲ್ಲಾ ಕೊಬ್ಬು ಕೆಟ್ಟದ್ದೇ ಅಲ್ಲ! ಆಲಿವ್ ಎಣ್ಣೆ, ಬಾದಾಮಿ, ವಾಲ್ನಟ್ಸ್, ಆವಕಾಡೊ ಮುಂತಾದ ಆರೋಗ್ಯಕರ ಕೊಬ್ಬುಗಳು ಮೆದುಳು ಮತ್ತು ಹೃದಯಕ್ಕೆ ಒಳ್ಳೆಯದು. ಟ್ರಾನ್ಸ್ ಫ್ಯಾಟ್ ಮತ್ತು ಸಂಸ್ಕರಿಸಿದ ಕೊಬ್ಬು ಪದಾರ್ಥಗಳನ್ನು ದೂರವಿಡಿ — ಇವು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಹೆಚ್ಚಿಸಬಹುದು.
5. ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರ ಬೇಡ:
ಸಿಹಿ ತಿಂಡಿಗಳು, ತಂಪು ಪಾನೀಯಗಳು, ಕೇಕ್‌ಗಳು — ಇವು ವಯಸ್ಸಾಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ. ಇವು ತೂಕ ಹೆಚ್ಚಿಸುವುದರ ಜೊತೆಗೆ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಚರ್ಮದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳಬಹುದು.
6. ಸಮಯಕ್ಕೆ ಸರಿಯಾಗಿ, ಸಮತೋಲಿತ ಊಟ ಮಾಡಿ
ಊಟ ಬಿಡುವುದು ಅಥವಾ ರಾತ್ರಿ ಹೊತ್ತು ಹೆಚ್ಚು ಊಟ ಮಾಡುವುದು ತಪ್ಪು. ದಿನವಿಡೀ ಸಣ್ಣ ಪ್ರಮಾಣದ ಸಮತೋಲಿತ ಊಟಗಳನ್ನು ಸೇವಿಸಿ. ಇದರಿಂದ ಶಕ್ತಿ ಮಟ್ಟ ಹೆಚ್ಚುತ್ತದೆ ಮತ್ತು ದೇಹದ ಚಯಾಪಚಯ ಸರಾಗವಾಗುತ್ತದೆ.


















