ಶಾಲಾ ದಿನಗಳ ಸ್ವಾತಂತ್ರ್ಯ ದಿನಾಚರಣೆಯ ನೆನಪು ಮಧುರ: ಸುನಿಧಿ ಹೆಬ್ಬಾರ್ ಬರೆದ ಬರಹ..

ಸ್ವಾತಂತ್ರ್ಯ ಎಂಬ ಉತ್ಸವದ ನೆನಪಿನ ಅಂಗಳದಲ್ಲಿ ಯಾವುದೇ ಹಬ್ಬವಾಗಲಿ, ಹಬ್ಬದ ದಿನ ನಾವು ಖುಷಿಯಾಗಿರುವುದು ಒಂದು ಲೆಕ್ಕವಾದರೆ ಆ ಹಬ್ಬದ ತಯಾರಿ ನೂರು ಪಟ್ಟು ಸಂತೋಷಕಾರಿಯಾದದ್ದು. ಅದೂ ಗೆಳೆಯರೊಂದಿಗೆ ಸೇರಿ, ಕೆಲಸವನ್ನೆಲ್ಲ ಹಂಚಿಕೊಂಡು, ಒಮ್ಮೆ ನಗುತ್ತಾ ಒಮ್ಮೆ ಕಚ್ಚಾಡುತ್ತ, ನಲಿಯುತ್ತ ಆಚರಿಸುತ್ತಿದ್ದದ್ದು ನಮ್ಮ ರಾಷ್ಟ್ರೀಯ ಹಬ್ಬಗಳು. ಅಗಸ್ಟ್ ತಿಂಗಳ ಜಿಟಿ ಜಿಟಿ ಮಳೆಯಲ್ಲಿ ಬಟ್ಟೆಯನೆಲ್ಲ ಒದ್ದೆಮಾಡಿಕೊಂಡು ಉತ್ಸಾಹದಿಂದ ನಾವೆಲ್ಲ ಸೇರುತ್ತಿದದ್ದು ಸ್ವಾತಂತ್ರ್ಯೋತ್ಸವಕ್ಕೆ.

ನಾನು ನನ್ನ ನೆನಪಿನ ಪುಟವನ್ನು ತಿರುವು ಹಾಕಿ ಹೋಗಬಯಸುವುದು ಮರಳಿ ನನ್ನ ಹೈ ಸ್ಕೂಲ್ ದಿನಗಳಿಗೆ. ನಾನು ನನ್ನ ಹೈಸ್ಕೂಲ್ ಮುಗಿಸಿದ್ದು ವಿವೇಕ ಆಂಗ್ಲ ಮಾಧ್ಯಮ ಶಾಲೆ, ಕೋಟದಲ್ಲಿ. ಆ ವಿಧ್ಯಾ ಸಂಸ್ಥೆಗೆ 75 ವರ್ಷದ ಇತಿಹಾಸ. ಆಂಗ್ಲ ಮಾಧ್ಯಮ ಹೈಸ್ಕೂಲ್ ಇತ್ತೀಚೆಗೆ ತೆರೆದ ಸಂಸ್ಥೆಯಾದರೂ ಕೂಡ ಅನಂತ ಇತಿಹಾಸ ಹೊಂದಿದ ವಿಧ್ಯಾ ಸಂಸ್ಥೆಯ ವಿಧ್ಯಾರ್ಥಿನಿಯಾದ ಹೆಮ್ಮೆ ಅಲ್ಲಿ ಓದಿದ 3 ವರ್ಷವೂ ಕೂಡ ನಮ್ಮದಾಗಿತ್ತು. ಇಷ್ಟು ಹಳೆಯ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ನೋಡಬೇಕು. 

ಅಗಸ್ಟ್ 15 ರಂದು ಖಡ್ಡಾಯವಾಗಿ ಹಾಜರಿರಬೇಕು ಎನ್ನುವ ನಿಯಮದಂತೆ ಕುಂದಾಪುರದಿಂದ ನಾನು ಹತ್ತುತ್ತಿದ್ದ ಖಾಸಗಿ ಬಸ್ನಲ್ಲಿ ಸೀಟ್ಗಳೆಲ್ಲವೂ ಖಾಲಿ ಖಾಲಿ.

ದಿನವೂ ಜನರ ನೂಕು ನುಗ್ಗಲಲ್ಲಿ ತೂರಾಡುತ್ತಾ ನೇಲುತ್ತ ಶಾಲೆ ಸೇರುತ್ತಿದ್ದ ನಮಗೆ ವರುಷದಲ್ಲಿ ಒಂದು ದಿನ ಬಸ್ನಲ್ಲಿ ನೆಮ್ಮದಿಯಿಂದ ಕೂರುವ ದೊಡ್ಡ ಅವಕಾಶ. ಹೀಗೆ ಕೂತು ಹೊರಡುತಿದ್ದ ನಮ್ಮನು ಬಸ್ ಕಂಡಕ್ಟರ್ ಕೆಳುತ್ತಿದದ್ದು ಹೀಗೆ “ಏನ್ ಇವತ್ತೂ ಸ್ಕೂಲ್ ರಜೆ ಇಲ್ದಾ” ಅಂತ. ನಮ್ಮ ಸಿ ಟಿಕೆಟ್ಗಾಗಿ 10 ರೂಪಾಯಿ ಕೊಡಲು ಕೈ ಮುಂದೆ ಮಾಡುವಾಗ ಮನಸಲ್ಲಿ “ಇವತಾದ್ರು ನಮಗೆ ಟಿಕೆಟ್ ಫ್ರೀ ಕೊಟ್ಟಿದ್ರೆ” ಅನ್ನೋದು. ಅದೆಲ್ಲ ಕನಸಿನ ಮಾತೇ ಸರಿ.

ಶಾಲೆ ತಲಪುತ್ತಿದಂತೆ ಮೊದಲು ನಮ್ಮ ಕ್ಲಾಸಿಗೆ ಹೋಗಿ ನಮ್ಮ ಬ್ಯಾಗ್ ಗಳನ್ನು ನಮ್ಮ ನಮ್ಮ ಬೆಂಚಿನ ಮೇಲೆ ಬಿಟ್ಟು ಓಡುತಿದ್ದದ್ದು ಕಲರ್ ಚಾಕ್ ಗಳನ್ನು ಒಟ್ಟು ಹಾಕಲು. ಅದನ್ನು ಬೇರೆ ಕ್ಲಾಸಿನವರಿಗಿಂತ ಮೊದಲು ಪಡೆಯಬೇಕೆಂಬ ಅವಸರದಲ್ಲಿ ಓಡಿ ತಂದು ನಾವು ಅರಭಿಸುತಿದ್ದದ್ದು ನಮ್ಮ ಚಿತ್ರಕಲೆಯ ಪ್ರತಿಭೆ ತೋರಿಸಲು. ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕಪ್ಪು ಬೋರ್ಡ್ ಅನ್ನು ಅಲಂಕರಿಸಿ ಅದನ್ನು ಒಂದೇ ಒರೇ ನೋಟದಿಂದ ದಿಟ್ಟಿಸುತ್ತಾ ಚೆನ್ನಾಗಿದೆಯೋ? ಇಲ್ಲವೋ? ಎಂದು ಕೇಳುತ್ತಿದ್ದದ್ದು ಗೆಳೆಯರನ್ನು. ಅವರು ಹೂಂ ಎಂದರೆ ಚೆನ್ನ, ಇಲ್ಲವಾದರೆ ಮತ್ತೆ ಬೆಲ್ ಹೊಡೆದು ಗ್ರೌಂಡ್ನಲ್ಲಿ ನಾವೆಲ್ಲ ಸೇರುವ ತನಕ ನಡೆಯುತ್ತಿತ್ತು ಈ ರಂಗಿನಾಟ. 

 

ಗ್ರೌಂಡ್ ನಲ್ಲಿ ಪಿ. ಟಿ ಸರ್ ನಮ್ಮನೆಲ್ಲ ಸಾಲಾಗಿ ನಿಲ್ಲಿಸಲು ಹರ ಸಾಹಸಪಟ್ಟು ಒಂದೆರಡು ಸಲ ವಿಸಿಲ್ ಊದಿ ಒಂದಿಬ್ಬರಿಗೆ ಏಟು ಹಾಕಿ ಕೊನೆಗೂ ಪ್ರಾಂಶುಪಾಲರೆಲ್ಲ ಬಂದು ಸೇರುವ ಹೊತ್ತಿಗೆ ಹೊಟ್ಟೆ ಕಿಚ್ಚಿನ ಹನಿ ಮಳೆ! ಅದರಲ್ಲೇ ಅವಸರದಲ್ಲಿ ಪ್ರಾಂಶುಪಾಲರು ಬಂದು ದ್ವಜರೋಹಣ ಮಾಡಿ ನಾವೆಲ್ಲರೂ ಅದಕ್ಕೆ ವಂದಿಸಿ ರಾಷ್ಟ್ರಗೀತೆ ಹಾಡುತಿದ್ದಾಗ, ಆ ಒಂದು ಘಳಿಗೆ ರೋಮಾಂಚನದ ಕ್ಷಣ! ಇಂದಿಗೂ ಕೂಡ. ಆಕಾಶದಲ್ಲಿ ಮಳೆ, ಬಿಸಿಲನ್ನು ಲೆಕ್ಕಿಸದೆ ಹಾರಾಡುವ ತ್ರಿವರ್ಣಧ್ವಜವನ್ನು ಕಂಡಾಗ ದೇಶಭಕ್ತಿ ಪ್ರತಿಯೊಬ್ಬರಲ್ಲೂ ಉಕ್ಕಿ ಹರಿಯುವುದು.

ಒಮ್ಮೆ ಕಣ್ಣ್ ಮುಚ್ಚಿ ತೆರೆವಷ್ಟರಲ್ಲಿ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಲಕ್ಷ್ಮಿ ಬೈ ಎಲ್ಲರೂ ಕಣ್ಣೆದುರು ಬಂದು ಬಿಡುವರು. ಅಷ್ಟರಲ್ಲೆ ಮಳೆ ಜೋರಾಗಿ ಸುರಿಯಲು ಅರಭಿಸಿದಾಗ, ಪ್ರಾಂಶುಪಾಲರ ಭಾಷಣವನ್ನು ಶಾಲೆಯ ಒಳಗೆ ನಡೆಸುತ್ತಿದ್ದರು. ಆನಂತರ ಎಲ್ಲರಿಗೂ ಸಿಹಿ ಹಂಚುವ ಸಂಬ್ರಮ. 

ಮನೆಗೆ ಬಂದು ಮೊದಲು ಮೊಬೈಲ್ ಅಲ್ಲೋ ಟಿ.ವಿ ಅಲ್ಲೋ ತಪ್ಪದೇ ನೋಡುತಿದ್ದದ್ದು ಪ್ರಧಾನ ಮಂತ್ರಿಯ ಕೆಂಪು ಕೋಟೆಯ ಮೇಲೆ ದೇಶವನ್ನುದೇಶಿಸಿ ಆಡುತಿದ್ದ ಭಾಷಣ. ಅಂದಿಗೆ ನನಗೆ ಎಷ್ಟು ಅರ್ಥವಾಗುತ್ತಿತ್ತು ಎಷ್ಟು ಬಿಡುತಿತ್ತು ಅದು ಮಾತ್ರ ತಿಳಿಯದು ಆದರೆ ಅವರು ಮುಕ್ತ ಕಂಠದಿಂದ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜದ ಎದುರಿಗೆ ನಿಂತು ಮಾತಾಡುವುದನ್ನು ನೋಡಲು ಅದೇನೋ ವಿಶೇಷ ಉತ್ಸಾಹ. ಇಡೀ ದಿನ ದೇಶಭಕ್ತಿ ಗೀತೆಗಳ ನಡುವೆ, ಹಾಡು ನೃತ್ಯಗಳ ಗುಂಗಿನಲ್ಲಿ ಕಳೆಯುತ್ತಿದ್ದೆವು. ಆ ಸುಂದರ ದಿನಗಳ ನೆನಪೇ ಮಧುರ.

ಸ್ವಾತಂತ್ರ್ಯ ಒಮ್ಮೆ 1947 ರ ಅಗಸ್ಟ್ 15 ರಂದು ನಮ್ಮ ಹಿರಿಯರು ಪಟ್ಟ ಪರಿಶ್ರಮಕ್ಕೆ ತಕ್ಕ ಫಲವಾಗಿ ದೇಶಕ್ಕೆ ದೊರಕಿತು. ನಾವೆಲ್ಲರೂ ಆ ಸ್ವಾತಂತ್ರ್ಯವನ್ನು ಪ್ರತಿ ವರ್ಷ ಧನ್ಯತಾ ಭಾವದಿಂದ ನೆನಪಿಸಿ ಕೊಳುತ್ತೇವೆ. ಉಳಿದೆಲ್ಲಾ ದಿನಗಳನ್ನು ನಮ್ಮಲ್ಲಿ ಇರದ ಸೌಕರ್ಯಗಳ ಲೆಕ್ಕ ಹಾಕುತ್ತ, ಕುಂದು ಕೊರತೆಗಳ ನಡುವೆ ಬದುಕುವ ನಾವೆಲ್ಲರೂ ಒಮ್ಮೆ ನೆಮ್ಮದಿಯ ನಿದ್ದೆ ಮಾಡುವ ಮುನ್ನ ಕೃಜ್ಞನತೆಯನ್ನು ಸಲ್ಲಿಸಬೇಕಾದದ್ದು, ಎಲ್ಲಾ ಬೆಲೆಯ ಎಲ್ಲೆಯನ್ನು ಮೀರುವ ಸ್ವಾತಂತ್ರ್ಯಾಕ್ಕೇ!

ಸುನಿಧಿ ಹೆಬ್ಬಾರ್

ದ್ವಿತೀಯ ಬಿಎಸ್ ಸಿ

ಬಂಡಾರ್ಕರ್ಸ್ ಕಾಲೇಜ್

ಕುಂದಾಪುರ