ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೆಗಾ ಕರಿಯರ್ ಕೌನ್ಸಿಲಿಂಗ್ ಕಾರ್ಯಕ್ರಮ

ಕುಂದಾಪುರ : ಸಿ.ಎ, ಸಿ.ಎಸ್ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳು ಸಾಕಷ್ಟು ಪೂರ್ವ ಸಿದ್ದತೆ ನಡೆಸಬೇಕು. ನಿರಂತರ ಪರಿಶ್ರಮ ಮತ್ತು ಸಾಧಿಸುವ ತುಡಿತವಿದ್ದರೆ ಖಂಡಿತವಾಗಿಯೂ ಸಿ.ಎ, ಸಿ.ಎಸ್ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯ ಎಂದು ಐ.ಸಿ.ಎ.ಐ. ಸೆಂಟ್ರಲ್ ಕೌನ್ಸಿಲ್ ಮೆಂಬರ್ ಸಿ.ಎ ಕೋತಾ ಎಸ್. ಶ್ರೀನಿವಾಸ್ ಹೇಳಿದರು.

ಅವರು ಜೂನ್ 8 ರಂದು ಐ.ಸಿ.ಎ.ಐ. ಉಡುಪಿ ಶಾಖೆಯ ಎಸ್.ಐ.ಆರ್.ಸಿ. ಹಾಗೂ ಕಾಲೇಜಿನ ವಾಣಿಜ್ಯ ವಿಭಾಗವು ಆಯೋಜಿಸಿದ್ದ ಮೆಗಾ ಕರಿಯರ್ ಕೌನ್ಸಿಲಿಂಗ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ಸುಬೇದಾರ್ ಮೇಜರ್ ಲೆಪ್ಟಿನೆಂಟ್ ಗಣೇಶ್ ಅಡಿಗರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜೀವನದಲ್ಲಿ ಸಾಧಿಸುವ ಛಲ ಮತ್ತು ಗುರಿಯೆಡೆಗಿನ ನಿರಂತರತೆಯನ್ನು ಯುವ ಸಮುದಾಯ ಕಾಯ್ದುಕೊಳ್ಳಬೇಕು. ಭಾರತೀಯ ಸೇನೆಗೆ ನಮ್ಮ ಕರಾವಳಿ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಂಡು ದೇಶ ಸೇವೆಗೆ ಸನ್ನದ್ಧರಾಗಬೇಕೆಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಿ.ಎ. ವಸಂತ ಶ್ಯಾನುಭೋಗ್ ವಿ., ಸಿ.ಎ- ಸಿ.ಎಸ್ ಅಕಾಂಕ್ಷಿಗಳಿಗೆ ಮಾಹಿತಿಯನ್ನು ನೀಡಿದರು.

ಸಿ.ಎ- ಸಿ.ಎಸ್ ನಲ್ಲಿ ತೇರ್ಗಡೆ ಹೊಂದಿದ ಕಾಲೇಜಿನ 30 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ವಿಜ್ ಮಾಸ್ಟರ್ ಸಿ.ಎ ಪ್ರದೀಪ್ ಜೋಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ಭಾಗವಹಿಸಿದ 12 ತಂಡಗಳಲ್ಲಿ ಪ್ರಥಮ ಬಹುಮಾನವನ್ನು ಬಿ.ಎಸ್ಸಿ ವಿಭಾಗ ಹಾಗೂ ದ್ವಿತೀಯ ಸ್ಥಾನವನ್ನು ಬಿ.ಸಿ.ಎ. ವಿಭಾಗದ ವಿದ್ಯಾರ್ಥಿಗಳು ಪಡೆದುಕೊಂಡರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ರಿಜಿನಲ್ ಕೌನ್ಸಿಲ್ ಮೆಂಬರ್ ಸಿ.ಎ ಗೀತಾ ಎ.ಬಿ., ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವೀಣಾ ಭಟ್ ಉಪಸ್ಥಿತರಿದ್ದರು.

ಸಿ.ಎ. ಲೋಕೇಶ್ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ದೀಕ್ಷಾ ಪ್ರಾರ್ಥಿಸಿದರು. ಸೌಭಾಗ್ಯ ಕಿಣಿ ಅತಿಥಿಗಳನ್ನು ಪರಿಚಯಿಸಿದರು. ಸಿ.ಎ. ಮಹೇಂದ್ರ ಶೆಣೈ ವಂದಿಸಿದರು.