ರಾಷ್ಟ್ರೀಕೃತ ಬ್ಯಾಂಕ್​ ಅಧಿಕಾರಿಗಳೊಂದಿಗೆ ಸಭೆ: ಸಾಲ ಸೌಲಭ್ಯ ಯೋಜನೆ ನಿರ್ಲಕ್ಷ್ಯ ಮಾಡದೆ ನ್ಯಾಯಯುತವಾಗಿ ಸ್ಪಂದಿಸಬೇಕು; ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಲ ಸೌಲಭ್ಯ ಹಾಗೂ ಯೋಜನೆಯ ಲಾಭ ಪಡೆಯಲು ಬರುವ ಗ್ರಾಹಕರಿಗೆ ಅನಗತ್ಯವಾಗಿ ಕಾಯಿಸಬಾರದು. ಬಡವರ ಕಲ್ಯಾಣ ಯೋಜನೆಗಳಿಗೆ ಸಂಬಂಧಪಟ್ಟಂತೆ ಸಾಲ ಸೌಲಭ್ಯ, ನಿರಾಕ್ಷೇಪಣಾ ಪತ್ರ, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಸಾಲ, ಪಿಎಂಇಜಿಪಿ, ಸ್ವನಿಧಿ, ಮುದ್ರಾ ಯೋಜನೆ ನಿರ್ಲಕ್ಷ್ಯ ಮಾಡದೆ ನ್ಯಾಯಯುತವಾಗಿ ಸ್ಪಂದಿಸಬೇಕು ಎಂದು ಬ್ಯಾಂಕ್​ ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಾಕೀತು ಮಾಡಿದರು.

ಉಡುಪಿ ಜಿಪಂನ ಡಾ. ವಿ.ಎಸ್​ ಆಚಾರ್ಯ ಸಭಾ ಭವನದಲ್ಲಿ ಬ್ಯಾಂಕ್​ ಆಫ್​ ಬರೋಡಾ ಸೈಬ್ರಕಟ್ಟೆಯ ಶಾಖೆಯ ಗ್ರಾಹಕರು ಮತ್ತು ಅಧಿಕಾರಿಗಳೊಂದಿಗೆ ಶುಕ್ರವಾರ (ಜ.30) ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಹಕಿ ರೂಪಾ ಎಂಬವರು ಮಾತನಾಡಿ, ನನಗೆ ದೇವರಾಜ ಅರಸು ನಿಗಮದಿಂದ ಸಬ್ಸಿಡಿ ಹಣ ಬ್ಯಾಂಕ್​ಗೆ ಬಂದಿದೆ. ಆದರೂ ಸಕಾಲದಲ್ಲಿ ಸಾಲ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಸ್ತ್ರೀ ಶಕ್ತಿ ಸಂಘಕ್ಕೆ ಸಾಲ ನೀಡಲು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಕೆಲ ಗ್ರಾಹಕರು ತಿಳಿಸಿದರು. ಇದಕ್ಕೆ ಕೋಟ ಪ್ರತಿಕ್ರಿಯಿಸಿ, ಸರ್ಕಾರದ ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದೆಂದು ಅಧಿಕಾರಿಗಳಿಗೆ ತಿಳಿಸಿದರು.

ಬೆಂಗಳೂರಿಗೆ ಅಲೆದಾಟ:
ಕನ್ನಡ ಮಾತನಾಡಲು ಬಾರದ ಅಧಿಕಾರಿಗಳಿದ್ದು ನಮಗೆ ವ್ಯವಹರಿಸಲು ಆಗುತ್ತಿಲ್ಲ. ಅದೇ ಕಾರಣಕ್ಕಾಗಿ ಮಾಹಿತಿಯನ್ನೂ ನೀಡದೆ ಸತಾಯಿಸುತ್ತಿದ್ದು, ವಿನಾಕಾರಣ ಬೆಂಗಳೂರಿಗೆ ಅಲೆದಾಡಿ ಬಂದಿದ್ದೇನೆ ಎಂದು ಬ್ಯಾಂಕ್​ನ ಗ್ರಾಹಕ ರಾಮ ಪೂಜಾರಿ ಆರೋಪಿಸಿದರು.
ಸಭೆಯಲ್ಲಿ ಶಿರಿಯಾರ ಗ್ರಾಪಂ ಅಧ್ಯಕ್ಷ ಸುಧೀಂದ್ರ ಶೆಟ್ಟಿ, ಶಿರಿಯಾರ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಪ್ರದಿಪ್​ ಬಲ್ಲಾಳ್​, ಬ್ಯಾಂಕ್​ ಆಫ್​ ಬರೋಡಾದ ಪ್ರಾದೇಶಿಕ ಪ್ರಬಂಧಕಿ ಶಜೀಲಾ ಬೀವಿ ಜೆ., ಉಪ ಪ್ರಬಂಧಕ ವಿದ್ಯಾಧರ್​ ಶೆಟ್ಟಿ, ಲೀಡ್​ ಬ್ಯಾಂಕ್​ನ ಪ್ರಬಂಧಕ ಹರೀಶ್​, ಬ್ಯಾಂಕ್​ ಆಫ್​ ಬರೋಡಾ ಸೈಬ್ರಕಟ್ಟೆ ಶಾಖೆ ಪ್ರಬಂಧಕ ಎಸ್​.ಕೆ. ಮನು ಉಪಸ್ಥಿತರಿದ್ದರು.