ಉಡುಪಿ: ಕುಡಿಯುವ ನೀರು, ವಿದ್ಯುತ್ ಮತ್ತು ರಸ್ತೆ ಸಂಪರ್ಕ ಮೂಲಭೂತ ಅವಶ್ಯಕತೆಗಳಾಗಿದ್ದು, ಸಾರ್ವಜನಿಕರ ಹಾಗೂ ಗ್ರಾಮದ ಸಮಸ್ಯೆಗಳನ್ನು ತಿಳಿಯುವ ನಿಟ್ಟಿನಲ್ಲಿ ನಗರಸಭಾ ಸದಸ್ಯ ವಿಜಯ್ ಕೊಡವೂರು ಸಭೆ ನಡೆಸಿದರು. ಹೊಸ ರಸ್ತೆ ನಿರ್ಮಾಣಕ್ಕಾಗಿ ಆ ಭಾಗದ ಎಲ್ಲಾ ನಾಗರಿಕರನ್ನು ಒಟ್ಟು ಸೇರಿಸಿ ಅಲ್ಲಿಯ ಅವಶ್ಯಕತೆಗಳನ್ನು ಪೂರೈಸುವುದು ನನ್ನಂತಹ ಜನಪ್ರತಿನಿಧಿ ಜವಾಬ್ದಾರಿ ಎಂದ ಅವರು, ಹೊಸ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಬರುವಂತಹ ಅಡೆ-ತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಭೆ ನಡೆಸುತ್ತಿದ್ದೇನೆ ಎಂದರು.
ಸರಕಾರದಿಂದ ಬರುವಂತಹ ಅನುದಾನಗಳನ್ನು ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಗ್ರಾಮದ ಎಲ್ಲಾ ನಾಗರಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ದುಂದು ವೆಚ್ಚವಾಗದಂತೆ ನೋಡಿಕೊಳ್ಳಲಾಗುವುದು. ಕುಡರ್ ತೋಟದ ನಾಗರಿಕರ ಸಹಕಾರದೊಂದಿಗೆ ಒಂದು ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣ ಮಾಡುವ ಅವಶ್ಯಕತೆ ಇದ್ದು, ಈವರೆಗೆ ರಸ್ತೆ ಸಂಪರ್ಕ ಇಲ್ಲದ ಈ ಭಾಗದ ಗ್ರಾಮಸ್ಥರ ಸಹಕಾರದಿಂದ ಮುಂದಿನ ಅಭಿವೃದ್ಧಿ ಕಾರ್ಯದ ಬಗ್ಗೆ ಚಿಂತನೆ ನಡೆಸಲಾಯಿತು ಎಂದು ಅವರು ಹೇಳಿದರು.