ಈ ಅಜ್ಜಿಯ ಕೈಯಲ್ಲರಳುವ ಮಣ್ಣಿನ ಪಾತ್ರೆ ನೋಡಿದ್ರೆ ಬೆರಗಾಗ್ತೀರಿ : ಕಡಾರಿಯ ಮೀನಜ್ಜಿಯ ಮಣ್ಣಿನ ಪಾತ್ರೆಗಳನ್ನೊಮ್ಮೆ ಕೊಂಡು ನೋಡಿ

ಕುಂಬಾರಿಕೆಯ ಕಾಯಕ ಧನಿಕನಾಗಿಸುವ ಬದಲು ಧರಿದ್ರನಾಗಿಸುವುದೇ ಹೆಚ್ಚು. ಇಷ್ಟಕ್ಕೂ ನಂಬಿದ ಕುಲ ಕಸುಬು ಬಿಡಲಾಗದೇ ತಂತ್ರಜ್ಞಾನಯುಗದಲ್ಲೂ ಮಣ್ಣಿಗೆ ಮಣ್ಣಿನದೇ ಗುಣಗಳಿವೆ ಎಂದು ಮಣ್ಣಿನ ಜೊತೆಗಿನ ಹೋರಾಟ ಜಾರಿಯಲ್ಲಿಟ್ಟುಕೊಂಡಿರುವುದು ಕೆಲವೇ ಕೆಲವು ಜನರು. ಅದರಲ್ಲೂ 70 ರ ಇಳಿವಯಸ್ಸಿನ ವೃದ್ಧೆಯಲ್ಲಿ ಇಂತಹ ಛಲ ಇದೆ ಎಂದರೆ ನಾವು ಆಭಿಮಾನದ ಸೆಲ್ಯೂಟ್ ಕೊಡಲೇಬೇಕು.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ-ರಾಷ್ಟ್ರೀಯ ಹೆದ್ದಾರಿಯ ಸುಮ್ಮ ಕಡಾರಿ ಎಂಬಲ್ಲಿನ ವಯೋವೃದ್ಧೆ ಮೀನಾ ಕುಲಾಲ್(70) ಅವರು ಬಡತನದ ಬೇಗೆಯ ನಡುವೆ ಬಾಲ್ಯದಿಂದಲೇ ಈ ಕಸುಬು ಮಾಡುತ್ತಾ ಬಂದಿದ್ದಾರೆ. ಕುಂಬಾರಿಕೆಯ ವೃತ್ತಿ ಅವರ ಬದುಕಿಗೆ ಬುತ್ತಿಯಾಗಿದೆ. ಆಹಾರದ ಸ್ವಾದಿಷ್ಠತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವ ಗುಟ್ಟು ತಿಳಿದವರು ಇವರ ಮಣ್ಣಿನ ಪಾತ್ರೆಗಳಿಗೆ ಮಾರುಹೋಗುತ್ತಿ ದ್ದಾರೆ.

ದೂರದ ಕಾಪುವಿನ ಮಣ್ಣಿನ ಜೊತೆ ಸ್ಥಳೀಯ ಜೇಡಿ ಮಣ್ಣನ್ನು ಬೆರೆಸಿ, ಚೆನ್ನಾಗಿ ತುಳಿದು ಹದಗೊಳಿಸಿ, ಕಸ ಕಡ್ಡಿಗಳಿಲ್ಲದ ಶುದ್ಧ ಮಣ್ಣಿನ ಮುದ್ದೆ ತಿರುಗಣೆಗೆ ಒಡ್ಡಿ ವಿವಿಧ ಆಕಾರದ ಪಾತ್ರೆಗಳನ್ನು ತಯಾರಿಸುತ್ತಾರೆ.

ಒಣಗಿದ ಬಳಿಕ  ಇದ್ದಿಲಿನಿಂದ ಉತ್ಪಾದಿಸಿದ ಬೆಂಕಿಯ ಕುಂಡದಲ್ಲಿ ಮೇಲಕ್ಕೆ ಕಟ್ಟಿಗೆಳ ಛಾವಣಿ ಮಾಡಿ ಪಾತ್ರೆಗಳನ್ನು ಕ್ರಮವಾಗಿ ಕವಚಿಟ್ಟು ಜೋಡಿಸಿ, ಬೈಹುಲ್ಲಿನಿಂದ ಮುಚ್ಚಿ ಮತ್ತೆ ಅದರ ಮೇಲೆ ತೆಳು ಪದರವಾಗಿ ಮಣ್ಣನ್ನು ಸವರಿ, ಕುಲುಮೆಯ ಮೂಲಕ ಊದಿ ಬೆಂಕಿಯ ಜ್ವಾಲೆಯನ್ನು ಹೆಚ್ಚಿಸುತ್ತಾ ಸರಿಯಾದ ಪ್ರಮಾಣದಲ್ಲಿ ಸುಟ್ಟು ಹೊರತೆಗೆದಾಗ ತನ್ನ ಕಲ್ಪನೆಯ ಕಲಾಕೃತಿ ಮೀನಕ್ಕನ ಕೈಯಲ್ಲಿ ನಗುತ್ತಿರುತ್ತದೆ.

ತನು ಬಳಲಿ ಬೆವರು ಸುರಿಸುತ್ತಿದ್ದರೂ ಈ ಬಡ ಜೀವದ ಸುಕ್ಕಾದ ಮುಖದಲ್ಲೊಂದು ಸಾರ್ಥಕತೆಯ ನಗೆ ಮೂಡುವ ಕ್ಷಣ, ನಮ್ಮಲ್ಲಿ ಆನಂದದ ಕಣ್ಣಿರನ್ನು ಬರಿಸದೇ ಇರದು. ಗಂಡನಿಲ್ಲದ ಮೀನಕ್ಕನಿಗೆ ಮಕ್ಕಳಾದ ಶೋಭಾ ಮತ್ತು ಸುಮಿತ್ರಾ ಈ ಕಾಯಕದಲ್ಲಿ ಕೈ ಜೋಡಿಸುತ್ತಾರೆ.

ತರಹೇವಾರಿ ಪಾತ್ರೆಗಳ ಯಾತ್ರೆ!

ಕಪ್ಪರೊಟ್ಟಿ ಓಡು(ಕಾವಲಿ), ಬಿಸಲೆ(ತುಳುನಾಡಿನಲ್ಲಿ ಮೀನು ಪಲ್ಯಕ್ಕೆ ಹೆಸರಾದ ಪಾತ್ರೆ), ಕರ(ಮಡಿಕೆ), ಮುಗಾಯಿ(ಕುಂಬ), ಗಡಿಗೆ(ಕೊಡಪಾನ), ಗದ್ದವು(ಊಟದ ಬಟ್ಟಲು), ಒಗ್ಗಿದ ಗದ್ದವು(ಮಕ್ಕಳ ಊಟದ ಬಟ್ಟಲು), ತಿಬುಲ(ಹಣತೆ), ಅಡ್ಯಾರ(ಅಡಿಗಾರ), ಮರಾಯಿ(ಜಾನುವಾರುಗಳಿಗೆ ನೀರು ಶೇಖರಣಿಗೆ ಇಡುವ ದೊಡ್ಡ ಪಾತ್ರೆ) ಮೊದಲಾದ ವೈವಿಧ್ಯಮಯ ಮಣ್ಣಿನ ಪರಿಕರಗಳನ್ನು ಇವರು ಮಾಡುತ್ತಿದ್ದರೂ ಹೆಚ್ಚಾಗಿ ಕಾವಲಿ ಮತ್ತು ಬಿಸಲೆ ಬೇಡಿಕೆಗನುಗುಣವಾಗಿ ಪೂರೈಸುತ್ತಾರೆ.

ಕಾರ್ಕಳದ ಮಾನಸಕಲಾ ಶಾಲಾ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರತೀ ವರ್ಷ ಕುಂಬಾರಿಕೆಯ ಪ್ರಾತ್ಯಕ್ಷಿಕೆ, ಮಾಹಿತಿಯನ್ನು ನೀಡುತ್ತಿರುವುದರ ಜೊತೆ ಸುತ್ತ ಮುತ್ತಲಿನ ಹಲವಾರು ಶಾಲಾ ವಿದ್ಯಾರ್ಥಿಗಳಿಗೆ ಕ್ಲೇಮಾಡೆಲಿಂಗ್ ಸ್ಪರ್ಧೆಗಳಿಗೆ ಬೇಕಾದ ಮಣ್ಣನ್ನು ಸಂತೋಷದಿಂದಲೇ ಒದಗಿಸುತ್ತಾರೆ.

ಬಡತನದ ಬೇಗೆ ಸುಡುತ್ತಿದ್ದರೂ ಇವರು ಮುಖದಲ್ಲಿ ಎಂದೂ ಮಾಸದ ಮುಗುಳುನಗೆ, ಮತ್ತು ಪ್ರಾಮಾಣಿಕತೆಯಿಂದ ನೆರೆಹೊರೆಯ ಎಲ್ಲರ ಮನ-ಮನೆಯ ಪ್ರೀತಿಯ ಮೀನಕ್ಕ. ಇವರ ಕಷ್ಟದ ಬದುಕಿಗೆ ಸ್ಪಂದಿಸಿದರೆ ಇವರು ‘ನಮ್ಮ’ ನೆರೆ ಮನೆಯ ಮೀನಕ್ಕಳಾಗುವುದಕ್ಕೆ ಸಂದೇಹವಿಲ್ಲ.

 ಕೊಂಡು ನೋಡಿ ಅಜ್ಜಿ ಮಾಡಿದ ಮಣ್ಣಿನ ಪಾತ್ರೆ:

ಫ್ಯಾಕ್ಟರಿಗಳಲ್ಲಿ ಉತ್ಪಾದಿಸುವ ಗಡಿಗೆ ಪಾತ್ರೆಗಳಿಗಿಂತ ಗುಣ ಮಟ್ಟದಲ್ಲಿ ಕೈಯಲ್ಲಿ ತಯಾರಿಸಿ ಕಾಯಿಸಿದ ಪಾತ್ರೆಗಳು ಹೆಚ್ಚು ಪ್ರಾಧಾನ್ಯತೆ ಪಡೆಯುತ್ತದೆ. ಎಲ್ಲರಿಗೂ ಬಾಯಿ ಮೊಸರಾಗಬೇಕು, ಕೈ ಕೆಸರು ಮಾಡಿಕೊಳ್ಳುವುದಕ್ಕೆ ಯಾರೂ ತಯಾರಿಲ್ಲ. ಈ ಕಲೆಗಾರಿಕೆ  ಮಣ್ಣಲ್ಲಿ ಮಣ್ಣಾಗಬಾರದು. ಈ ವಿದ್ಯೆಯನ್ನು ಕಲಿತು ಮುಂದಿನ ದಿನಗಳಲ್ಲಿ ಉತ್ತಮ ಮಾರುಕಟ್ಟೆ ಸೌಲಭ್ಯ ಮತ್ತು ಗೌರವ ದೊರೆಯುವಂತೆ ಇಂದಿನ ಯುವಪೀಳಿಗೆ ಪ್ರಯತ್ನ ಮಾಡಬೇಕು ಎನ್ನುವುದು ಇವರ ಆಶೆ.

ಜಗತ್ತೇ ಪ್ಲಾಸ್ಟಿಕ್ ಮಯವಾಗುತ್ತಿದೆ, ಆದರೆ ಮಣ್ಣಿನ ಪಾತ್ರೆಗಳು ಆರೋಗ್ಯಕ್ಕೆ ಹಿತಕೊಡುವಷ್ಟು ಬೇರ್ಯಾವ ಪಾತ್ರೆಗಳು ಕೊಡುವುದಿಲ್ಲ ಎನ್ನುವುದು ಮಾತ್ರ ಸತ್ಯ. ಮಣ್ಣಿನ ಪಾತ್ರೆಯ ಸಂಸ್ಕೃತಿಯನ್ನು ಉಳಿಸುವ ಜೊತೆಜೊತೆಗೇ ಕುಂಬಾರಿಕೆಯನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ಮೀನಾ ಅಜ್ಜಿಯ ಬದುಕಿಗೂ ಖುಷಿಕೊಡೋಣ. ಉತ್ತಮ ಆರೋಗ್ಯಕ್ಕೆ ಪೂರಕವಾಗುವ ಮಣ್ಣಿನ ಪಾತ್ರೆಗಳನ್ನು ಬಳಸೋಣ.  ಮಣ್ಣಿನ ಪಾತ್ರೆಗಳ ಲಭ್ಯತೆ ಹಾಗೂ ಹೆಚ್ಚಿನ ಮಾಹಿತಿಗಾಗಿ: 9980358653

ಚಿತ್ರ:ಬರಹ-ಚಂದ್ರನಾಥ ಬಜಗೋಳಿ