ಮಣಿಪಾಲ ಕೆಎಂಸಿಯ ಇಬ್ಬರು ವಿದ್ಯಾರ್ಥಿಗಳ ವೈದ್ಯಕೀಯ ವರದಿ ನೆಗೆಟೀವ್: ಕೊರೊನಾ ಆತಂಕ ದೂರ

ಉಡುಪಿ: ಶಂಕಿತ ಕೊರೊನಾ ಸೋಂಕಿನ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಪ್ರತ್ಯೇಕ ಕೊಠಡಿಗೆ ಗುರುವಾರ ದಾಖಲಾಗಿದ್ದ ಮಣಿಪಾಲ ಕೆಎಂಸಿ ವಿದ್ಯಾರ್ಥಿಗಳಲ್ಲಿ ಸೋಂಕು ಇಲ್ಲ ಎಂಬುವುದು ಪರೀಕ್ಷೆಯಿಂದ ದೃಢಪಟ್ಟಿದೆ.
ಈ ವಿದ್ಯಾರ್ಥಿಗಳು ಮೂಲತಃ ಆಂಧ್ರ ಪ್ರದೇಶ ಹಾಗೂ ಕೇರಳ ರಾಜ್ಯದವರಾಗಿದ್ದು, ಈಚೆಗೆ  ಅಮೆರಿಕ ಹಾಗೂ ಮಲೇಷ್ಯಾ ಪ್ರವಾಸ ಕೈಗೊಂಡು ಮಣಿಪಾಲಕ್ಕೆ ಮರಳಿದ್ದರು. ಬಳಿಕ ಇವರಲ್ಲಿ ಕೊರೊನಾ ರೋಗದ ಪ್ರಾಥಮಿಕ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಶಿವಮೊಗ್ಗದ ಲ್ಯಾಬ್ ಗೆ ಕಳುಹಿಸಿಕೊಡಲಾಗಿದ್ದ ವಿದ್ಯಾರ್ಥಿಗಳ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯ ವರದಿ ವೈದ್ಯರ ಕೈ ಸೇರಿದ್ದು, ಅದರಲ್ಲಿ ಸೋಂಕು ಇಲ್ಲವೆಂದು ಖಚಿತಗೊಂಡಿದೆ ಎಂದು ಡಿಎಚ್ಒ ಡಾ.ಸುಧೀಂದ್ರ ಸೂಡ ತಿಳಿಸಿದ್ದಾರೆ.
ಇಂದು ಆಸ್ಪತ್ರೆಗೆ ದುಬೈ ಮೂಲದ ಮತ್ತೊಬ್ಬ ಕೆಎಂಸಿಯ ವಿದ್ಯಾರ್ಥಿ ದಾಖಲಾಗಿದ್ದು, ಆತ ಈಚೆಗೆ ಅಲ್ಲಿಂದ ಮರಳಿದ್ದ ಎನ್ನಲಾಗಿದೆ. ಆತನ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅದರ ವರದಿ ನಾಳೆ ಬರುವ ಸಾಧ್ಯತೆ ಎಂದು ಮಾಹಿತಿ‌ ನೀಡಿದ್ದಾರೆ.