ಶಾಲಾ ಆರೋಗ್ಯ ಕಾರ್ಯಕ್ರಮ: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ನಡುವೆ ಒಪ್ಪಂದ

ಮಣಿಪಾಲ: ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಮತ್ತು ಉಡುಪಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಡುವೆ ಜೂನ್ 2 ರಂದು ಶಾಲಾ ಆರೋಗ್ಯ ಕಾರ್ಯಕ್ರಮದಡಿ ಉಡುಪಿಯ ಮಕ್ಕಳಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಾಗಿ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಸಮಗ್ರ ಶಿಕ್ಷಣ ಕರ್ನಾಟಕ ಇದರ ಅಡಿಯಲ್ಲಿ ವಿಶೇಷ ಅಗತ್ಯವಿರುವ ಮಕ್ಕಳಿಗಾಗಿ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿರುವ ತರಬೇತಿ ಕೇಂದ್ರದ ಸರ್ವತೋಮುಖ ಸುಧಾರಣೆಯನ್ನು ಕೈಗೊಳ್ಳಲು ಬಯಸಿದ್ದು, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ಉಡುಪಿಯ ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ತಿಳುವಳಿಕಾ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕಿದೆ. ಈ ಶಾಲಾ ಆರೋಗ್ಯ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ಎಲ್ಲಾ ಇತರ ಕೇಂದ್ರಗಳಿಗೆ ವಿಸ್ತರಿಸಲಾಗುತ್ತದೆ ಎಂದು ಸಂಸ್ಥೆಯು ತಿಳಿಸಿದೆ.

ಆರಂಭದಲ್ಲಿ ಫಿಸಿಯೋಥೆರಪಿ, ಆಕ್ಯುಪೇಷನಲ್ ಥೆರಪಿ, ಸ್ಪೀಚ್ ಮತ್ತು ಹಿಯರಿಂಗ್, ಆಪ್ಟೋಮೆಟ್ರಿ ಮತ್ತು ಕ್ಲಿನಿಕಲ್ ಸೈಕಾಲಜಿ ವಿಭಾಗಗಳು ಉಚಿತ ಮೌಲ್ಯಮಾಪನ ಮತ್ತು ಅಗತ್ಯವಿರುವ ಮಕ್ಕಳಿಗೆ ಚಿಕಿತ್ಸೆಯನ್ನು ಒದಗಿಸಲಿದೆ.

ಎಂಸಿಎಚ್‌ಪಿ ಡೀನ್ ಡಾ. ಅರುಣ್ ಜಿ.ಮೈಯಾ ಮತ್ತು ಸಾರ್ವಜನಿಕ ಶಿಕ್ಷಣ ಇಲಖೆಯ ಉಪನಿರ್ದೇಶಕ ಗೋವಿಂದ್ ಮಡಿವಾಳ್ ಈ ತಿಳುವಳಿಕಾ ಒಪ್ಪಂದವನ್ನು ವಿನಿಮಯ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಡಾ. ಅಶೋಕ ಕಾಮತ್ (ಬಿಇಒ, ಉಡುಪಿ), ಶ್ರೀಮತಿ ಗಂಗಯ್ಯ, ಶ್ರೀ ಶಿವಾನಂದ ನಾಯಕ್, ಡಾ. ವೆಂಕಟರಾಜ ಐತಾಳ್ ಯು.
(ಅಸೋಸಿಯೇಟ್ ಡೀನ್, ಎಂಸಿಎಚ್‌ಪಿ), ಡಾ ರೇಶ್ಮಿ ಬಿ (ಅಸೋಸಿಯೇಟ್ ಡೀನ್, ಎಂಸಿಎಚ್‌ಪಿ), ಡಾ. ಭಾಮಿನಿ ರಾವ್, ಮತ್ತು
ಡಾ.ಸುನೀಲ ಜಾನ್ ಉಪಸ್ಥಿತರಿದ್ದರು.