ಮಂಗಳೂರು: ಅವಿಭಜಿತ ದ.ಕ ಜಿಲ್ಲೆಯಲ್ಲಿ ಸುಸಜ್ಜಿತ 16 ಶಾಖೆಗಳನ್ನು ಹೊಂದಿರುವ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ದಾಖಲೆಯ 1.60% ಎನ್.ಪಿ.ಎ ಹಾಗೂ 8.27 ಕೋಟಿ ಲಾಭ ಗಳಿಸಿರುವ ಕರಾವಳಿಯ ಮುಂಚೂಣಿಯ ಸಹಕಾರಿ ಲಿಮಿಟೆಡ್ ಬ್ಯಾಂಕ್ ಗಳಲ್ಲಿ ಒಂದಾಗಿರುವ ಎಂಸಿಸಿ ಬ್ಯಾಂಕ್ ತನ್ನ ಶತಮಾನೋತ್ತರ ದಶಮಾನದ ಸಂಭ್ರಮದಲ್ಲಿದೆ. ನ.27 ಭಾನುವಾರದಂದು ನಗರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ಬ್ಯಾಂಕ್ ತನ್ನ ಶತಮಾನೋತ್ತರ ದಶಮಾನ ಸಂಭ್ರಮವನ್ನು ಆಚರಿಸುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೋ ತಿಳಿಸಿದರು.
ಅವರು ಗುರುವಾರದಂದು ಬ್ಯಾಂಕಿನ ಮಂಗಳೂರಿನ ಆಡಳಿತ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ಉಭಯ ಜಿಲ್ಲೆಗಳ ಧರ್ಮಪ್ರಾಂತ್ಯಗಳ ಧರ್ಮಗುರುಗಳಾದ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನಾ ಮತ್ತು ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೋಬೋ, ಶಾಸಕ ವೇದವ್ಯಾಸ ಕಾಮತ್ ಹಾಗೂ ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಉಪಸ್ಥಿತರಿರಲಿದ್ದಾರೆ ಎಂದ ಅವರು, ಕಾರ್ಯಕ್ರಮವು ಸಂಜೆ 5.45ಕ್ಕೆ ಆರಂಭಗೊಂಡು, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಹಭೋಜನದೊಂದಿಗೆ ಮುಕ್ತಾಯವಾಗುವುದು ಎಂದರು.
ಉತ್ಸವದ ಸಂದರ್ಭದಲ್ಲಿ ಸಮಾಜದ ಅಶಕ್ತ ವರ್ಗದವರ ಚಿಕಿತ್ಸೆಗೆ, ಉನ್ನತ ಶಿಕ್ಷಣಕ್ಕೆ, ವಸತಿ ಮತ್ತು ಹೆಣ್ಣುಮಕ್ಕಳ ಮದುವೆಯ ವೆಚ್ಚಕ್ಕೆ ಸಹಾಯಹಸ್ತ ನೀಡಲಾಗುವುದು. ದೇಣಿಗೆ ನೀಡುವ ಕಾರ್ಯಕ್ರಮವು ನ.26 ಶನಿವಾರದಂದು ಮಧ್ಯಾಹ್ನ 3.30 ಕ್ಕೆ ಹಂಪನಕಟ್ಟೆಯ ಪ್ರಧಾನ ಕಚೇರಿಯ ಪಿ.ಎಫ್.ಎಕ್ಸ್ ಸಲ್ಡಾನ ಸ್ಮಾರಕ ಸಭಾಂಗಣದಲ್ಲಿ ಗಣ್ಯರ ಸಮಕ್ಷಮ ನಡೆಯಲಿರುವುದು ಎಂದು ಅವರು ಹೇಳಿದರು.
7.60% ಬಡ್ಡಿದರದಲ್ಲಿ ವಿಶೇಷ ನಿರಖು ಠೇವಣಿ ಯೋಜನೆ:
ಶತಮಾನೋತ್ತರ ದಶಮಾನೋತ್ಸವ ಸಂದರ್ಭದಲ್ಲಿ 7.60% ಬಡ್ಡಿದರದಲ್ಲಿ ವಿಶೇಷ ನಿರಖು ಠೇವಣಿ ಯೋಜನೆಯನ್ನು ಬ್ಯಾಂಕ್ ಪರಿಚಯಿಸಿದ್ದು, ಸೀಮಿತ ಯೋಜನೆಯ ಲಾಭವನ್ನು ಗ್ರಾಹಕರು ಪಡೆದುಕೊಳ್ಳಬಹುದು. ಇತರ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳಿಗೆ ಇರುವಂತೆ ಎಂಸಿಸಿ ಬ್ಯಾಂಕಿನಲ್ಲಿ ಐದು ಲಕ್ಷದವರೆಗಿನ ಠೇವಣಿಗೆ ಡೆಪೋಸಿಟ್ ಇನ್ಶೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ ನಿಂದ ವಿಮಾ ಸೌಲಭ್ಯವಿರುವುದರಿಂದ ಗ್ರಾಹಕರು ನಿಶ್ಚಿಂತೆಯಿಂದ ಠೇವಣಿ ವ್ಯವಹಾರ ಮಾಡಬಹುದು.
ವಿದ್ಯಾ ಭವಿಷ್ಯ:
ವಿದ್ಯಾರ್ಥಿಗಳ ಉಳಿತಾಯ ಖಾತೆಗೆ ಬ್ಯಾಂಕಿನಲ್ಲಿ 5.00% ಬಡ್ಡಿ ನೀಡಲಾಗುತ್ತದೆ. ಇದರ ಜೊತೆಗೆ ಬ್ಯಾಂಕಿನಲ್ಲಿ ಸ್ಪರ್ಧಾತ್ಮಕ ದರದಲ್ಲಿ ಚಿನ್ನಾಭರಣ ಸಾಲ, ಶಿಕ್ಷಣ ಸಾಲ, ಲಾಕರ್ ಸೌಲಭ್ಯಗಳು ಇವೆ.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿ’ಸಿಲ್ವ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ನಿರ್ದೇಶಕರುಗಳಾದ ಆಂಡ್ರೂ ಡಿಸೋಜ, ಮಾರ್ಸೆಲ್ ಡಿಸೋಜ, ಜೋಸೆಫ್ ಪತ್ರಾವೊ, ಹೆರಾಲ್ಡ್ ಮೊಂತೆರೊ, ಎಲ್ರೋಯ್ ಕ್ರಾಸ್ಟೊ, ಜೆ.ಪಿ.ರೊಡ್ರಿಗಸ್, ಡೇವಿಡ್ ಡಿಸೋಜ, ರೋಶನ್ ಡಿಸೋಜ, ಡಾ.ಜೆರಾಲ್ಡ್ ಪಿಂಟೋ, ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೋಜ, ಸಿ.ಜೆ ಪಿಂಟೊ, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್, ಆಲ್ವಿನ್ ಮೊಂತೆರೊ, ಶರ್ಮಿಳಾ ಮಿನೇಜಸ್ ಉಪಸ್ಥಿತರಿದ್ದರು.