ಮಂಗಳೂರು: ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ111 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2023 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ 12.20 ಕೋಟಿ ರೂಪಾಯಿ ಲಾಭ ಗಳಿಕೆಯನ್ನು ದಾಖಲಿದೆ. ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆ ಮಾಡಲು ಬ್ಯಾಂಕ್ ಶ್ರಮಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರಪ್ರಥಮ ಬಾರಿಗೆ 1.37% ಎನ್.ಪಿ.ಎ. ದಾಖಲಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಮಾಹಿತಿ ನೀಡಿದರು.
ಅವರು ಬುಧವಾರದಂದು ಮಂಗಳೂರಿನಲ್ಲಿರುವ ಬ್ಯಾಂಕಿನ ಆಡಳಿತ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ದಾಖಲೆಯ ಲಾಭ
ದಾಖಲೆಯ ಲಾಭ ಮತ್ತು ಕನಿಷ್ಟ ಎನ್.ಪಿ.ಎ. ಜೊತೆಗೆ, 2022-23 ನೇ ವಿತ್ತೀಯ ವರ್ಷದಲ್ಲಿ ಆಡಳಿತ ಮಂಡಳಿ, ಅಧಿಕಾರಿ ವರ್ಗ ಮತ್ತು ಸಿಬ್ಬಂದಿಯ ಶ್ರಮದಿಂದ, ಬ್ಯಾಂಕ್ ಸ್ಥಾಪನೆಯಾದಂದಿನಿದ ದಕ್ಷಿಣ ಕನ್ನಡ ಮತ್ತುಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯ ಕ್ಷೇತ್ರವನ್ನುಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತುಕೊಡಗು ಹೀಗೆ 5 ಜಿಲ್ಲೆಗಳಿಗೆ ವಿಸ್ತರಿಸಿ ಮಹತ್ವದ ಸಾಧನೆಯನ್ನು ಮಾಡಿದೆ. ಶೀಘ್ರದಲ್ಲೇ ಈ ಜಿಲ್ಲೆಗಳಲ್ಲಿ ಬ್ಯಾಂಕಿನ ಶಾಖೆಗಳನ್ನು ತೆರೆಯಲುಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 16 ಶಾಖೆಗಳನ್ನು ಹೊಂದಿರುವ ಎಮ್.ಸಿ.ಸಿ. ಬ್ಯಾಂಕ್ 2022-23 ವಿತ್ತೀಯ ವರ್ಷದಲ್ಲಿ ದಾಖಲೆಯ ರೂ.12.20 ಕೋಟಿ ಲಾಭವನ್ನು ಗಳಿಸಿದೆ. ಪ್ರಸಕ್ತ ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಬ್ಯಾಂಕಿನ ವ್ಯವಹಾರ ಪ್ರಗತಿಯನ್ನು ದಾಖಲಿಸಿದ್ದು, ಬ್ಯಾಂಕಿನ ನಿವ್ವಳ ಮೌಲ್ಯ ರೂ.46 ಕೋಟಿಯಿಂದ ರೂ.59 ಕೋಟಿಗೆತಲುಪಿದೆ. ಬ್ಯಾಂಕಿನ ವ್ಯವಹಾರ ರೂ. 933.21 ಕೋಟಿ ತಲುಪಿದೆ ಎಂದರು.
ಸಂಸ್ಥಾಪಕರ ದಿನಾಚರಣೆ
ಬ್ಯಾಂಕಿನ ಇತಿಹಾಸದಲ್ಲೆ ಮೊದಲ ಬಾರಿಗೆ ಸ್ಥಾಪಕರ ದಿನಾಚರಣೆಯನ್ನು ಬ್ಯಾಂಕಿನಲ್ಲಿ ಸಂಭ್ರಮೋಲ್ಲಾಸದಿಂದ ಆಚರಿಸುವುದರ ಜೊತೆಗೆ, ನವೀಕೃತ ಸಭಾಭವನಕ್ಕೆ ಸ್ಥಾಪಕರ ಹೆಸರನ್ನು ಇಡಲಾಗಿದೆ. ಎಲ್ಲಾ 16 ಶಾಖೆಗಳಲ್ಲಿ ಗ್ರಾಹಕರ ಸಮಾವೇಶಗಳನ್ನು ಏರ್ಪಡಿಸಿ, ಬ್ಯಾಂಕಿನ ಸೇವೆಯ ಬಗ್ಗೆ ಗ್ರಾಹಕರ ಸಲಹೆ ಸೂಚನೆಗಳನ್ನು ಸ್ವೀಕರಿಸಿ, ಶಾಖಾವಾರು ಅನುಷ್ಠಾನಗೊಳಿಸಲಾಗಿದೆ. ಇದರಿಂದಾಗಿ ಬ್ಯಾಂಕಿನಲ್ಲಿಗ್ರಾಹಕರ ಸಂಖ್ಯೆಯು ಹೆಚ್ಚಿತು. ಬ್ಯಾಂಕಿನ ಶತಮಾನೋತ್ತರ ದಶಮಾನೋತ್ಸವವನ್ನು ಸಾಮಾಜಿಕ ಕಾಳಜಿಯೊಂದಿಗೆ, ಸಮಾಜದ ಅಶಕ್ತ ವರ್ಗದ ಜನರ ಚಿಕಿತ್ಸೆ, ವಸತಿ ನಿವೇಶನ ದುರಸ್ತಿ, ಮಕ್ಕಳ ವಿದ್ಯಾಭ್ಯಾಸ ಹಾಗೂ ಹೆಣ್ಣು ಮಕ್ಕಳ ವಿವಾಹದ ವೆಚ್ಚಕ್ಕೆ ನೆರವು ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದರು.
ಬ್ಯಾಂಕಿನ ಸದಸ್ಯರು ಬ್ಯಾಂಕಿನ ಪ್ರಸಕ್ತ ಆಡಳಿತ ಮಂಡಳಿಗೆ ನೀಡಿದ ಬೆಂಬಲ, ಗ್ರಾಹಕರ ವಿಶ್ವಾಸ ಮತ್ತುಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳ ಶ್ರಮದಿಂದ ಇದು ಸಾಧ್ಯವಾಗಿದೆ. ಜೊತೆಗೆ ಸಾಕಷ್ಟು ಅನಿವಾಸಿ ಭಾರತೀಯರು ಬ್ಯಾಂಕಿನಲ್ಲಿ ವ್ಯವಹಾರ ಮತ್ತು ಹೂಡಿಕೆಯನ್ನು ಮಾಡಿರುವುದರಿಂದ ಈ ಸಾಧನೆಯನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ಮಹಾ ಪ್ರಬಂಧಕ ಸುನಿಲ್ ಮಿನೇಜಸ್, ಸದಸ್ಯರಾದ ಆಂಡ್ರ್ಯೂ ಡಿಸೋಜಾ, ಡಾ| ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೋಜಾ, ಎಲ್ರೊಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೆರೊ, ರೋಶನ್ ಡಿಸೋಜಾ, ಮಾರ್ಸೆಲ್ ಡಿಸೋಜಾ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಡಿಸೋಜಾ, ಆಲ್ವಿನ್ ಪಿ. ಮೊಂತೆರೊ, ಫೆಲಿಕ್ ಡಿ ಕ್ರೂಜ್, ಶರ್ಮಿಳಾ ಮಿನೇಜಸ್ ಉಪಸ್ಥಿತರಿದ್ದರು.