ಉಡುಪಿ: ಕೃಷ್ಣಲೀಲೋತ್ಸವದ ಮಾದರಿಯಲ್ಲಿ ನಾಡಿನಾದ್ಯಂತ ರಾಮತ್ವದ ಜಾಗೃತಿ, ರಾಮಲೀಲೋತ್ಸವಗಳು ವ್ಯಾಪಕವಾಗಿ ನಡೆಯಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಎಂ. ಮೋಹನ ಆಳ್ವರ ನೇತೃತ್ವದಲ್ಲಿ
ಮೂಡಬಿದಿರೆಯ ನೂತನ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಶ್ರೀಗಳು ಮಾರ್ಗದರ್ಶನ ನೀಡಿದರು.
ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಎಲ್ಲೆಡೆ ಅತ್ಯಂತ ಸಂಭ್ರಮದ ಕೃಷ್ಣ ಲೀಲೋತ್ಸವ ಮುದ್ದುಕೃಷ್ಣ ಸ್ಪರ್ಧೆ, ಕೃಷ್ಣ ಸಂದೇಶಗಳ ರಸಪ್ರಶ್ನೆ, ಪ್ರವಚನ ಸಪ್ತಾಹಗಳೇ ಮೊದಲಾಗಿ ಕೃಷ್ಣ ಸಂದೇಶಗಳ ಜಾಗೃತಿಗಾಗಿ ಉತ್ಸವಗಳು ನಡೆಯುತ್ತವೆ. ಅದರಂತೆ ಪ್ರಸ್ತುತ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಭರದ ಸಿದ್ಧತೆ ಮತ್ತು ಆ ಸಂಬಂಧ ನಿಧಿ ಸಂಗ್ರಹ ಅಭಿಯಾನಕ್ಕೂ ದೇಶಾದ್ಯಂತ ಅತ್ಯಂತ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೇನು ಮುಂಬರುವ ಚೈತ್ರಮಾಸದಲ್ಲಿ (ಎಪ್ರಿಲ್) ರಾಮನವಮೀ ಸಮೀಪಿಸುತ್ತಿದೆ. ಈ ಶುಭಸಂದರ್ಭದಲ್ಲಿ ವಿವಿಧ ವಯೋಮಾನದ ಮಕ್ಕಳಿಗೆ ರಾಮಾಯಣದ ಪಾತ್ರಗಳ ಛದ್ಮವೇಷ, ರಸಪ್ರಶ್ನೆ, ಆಶುಭಾಷಣ, ಪ್ರಬಂಧ, ಚಿತ್ರಕಲೆ ಮೊದಲದ ಸ್ಪರ್ಧೆಗಳು, ಸಾಮೂಹಿಕ ಭಜನೆ, ಸಂಗೀತ ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳ ರಾಮಾಯಣ ಕುರಿತಾಗಿ ಚಿಂತನೆ ಉಪನ್ಯಾಸ ಪ್ರವಚನ ಇತ್ಯಾದಿಗಳು ಎಪ್ರಿಲ್ 13 ರಿಂದ 21 ರ ನಡುವಿನ ಅವಧಿಯಲ್ಲಿ ನಡೆಯಬೇಕು ಎಂದರು.
ವಿವಿಧ ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜುಗಳು ಭಜನಾ ಸಂಘಗಳು, ಸಾಂಸ್ಕೃತಿಕ ಸಂಸ್ಥೆಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಆಯೋಜಿಸಬೇಕು ಎಂದರು.
ಸಾಂಸ್ಕೃತಿಕ ಮುಖಂಡರುಗಳಾದ ಹರಿಕೃಷ್ಣ ಪುನರೂರು, ಪ್ರದೀಪ್ ಕಲ್ಕೂರ್, ಬಾಹುಬಲಿ ಪ್ರಸಾದ್, ಭುವನಾಭಿರಾಮ ಉಡುಪ ಮೊದಲಾದವರು ಭಾಗವಹಿಸಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವಹಿಂದು ಪರಿಷತ್ ಮೊದಲಾದ ಹಿಂದೂ ಸಂಘಟನೆಗಳನ್ನು ಈ ಉತ್ಸವದ ಬಗ್ಗೆ ಸಂಯೋಜಿಸಿಕೊಂಡು ನಾಡಿನಾದ್ಯಂತ ಈ ಉತ್ಸವ ಅತ್ಯಂತ ಯಶಸ್ವಿಯಾಗುತ್ತದೆ ಎಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.












