ಹಿರಿಯಡಕ: ಕಾರ್ಕಳ ತಾಲೂಕಿನ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ, ಶ್ರೀ ಭದ್ರಕಾಳಿ ದೇವರಿಗೆ ಬ್ರಹ್ಮಕಲಶೋತ್ಸವವು ಮೇ.20 ರಿಂದ 25 ರವರೆಗೆ ವೇದಮೂರ್ತಿ ಷಡಂಗ ಶ್ರೀ ಬಿ. ಗುರುರಾಜ ತಂತ್ರಿ ಅವರ ನೇತೃತ್ವದಲ್ಲಿ ಜರಗಲಿದೆ.
ಧಾರ್ಮಿಕ ಕಾರ್ಯಕ್ರಮಗಳು:
ಮೇ.20 ರ ಬೆಳಿಗ್ಗೆ 12 ಕಾಯಿ ಗಣಪತಿ ಹೋಮ, ನವಗ್ರಹ ಹೋಮ, ಸಂಜೆ 5ರಿಂದ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ, ಭೋಜನ ಶಾಲೆ, ಪಾಕಶಾಲೆ, ವಸಂತ ಮಂಟಪ ಉದ್ಘಾಟನೆ ನಡೆಯಲಿದೆ. ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ|ಜಿ. ಶಂಕರ್ ಅಧ್ಯಕ್ಷತೆ ವಹಿಸುವರು.
ಮೇ.21ರ ಬೆಳಿಗ್ಗೆ 8 ರಿಂದ 108 ಕಲಶ ಸಹಿತ ಮಹಾ ಮಂತ್ರ ಹೋಮ, ಕಲಶಾಭಿಷೇಕ, ಮಹಾಪೂಜೆ, ಮೇ 22 ರ ಬೆಳಗ್ಗೆ 8 ರಿಂದ 9 ಆವರ್ತನ ಸಪ್ತಶತಿ ಪಾರಾಯಣ, 10,001 ಸಂಖ್ಯೆಯಲ್ಲಿ ನವಾಕ್ಷರೀ ಮಂತ್ರ ಜಪ, ಮೇ 22ರ ಬೆಳಿಗ್ಗೆ 8 ರಿಂದ ಶ್ರೀ ಮಹಾರುದ್ರ ಯಾಗ, ಸಹಸ್ರ ಬ್ರಹ್ಮಕಲಶ ಮಂಡಲ ರಚನೆ.
ಬ್ರಹ್ಮಕುಂಭಾಭಿಷೇಕ:
ಮೇ.24ರ ಬೆಳಿಗ್ಗೆ 7 ರಿಂದ ಭಜನೆ, 7.30 ರಿಂದ ಗಣಪತಿ ಹೋಮ, ಪಂಚಾಮೃತ ಅಭಿಷೇಕ, 9.50ಕ್ಕೆ ಬ್ರಹ್ಮಕುಂಭಾಭಿಷೇಕ, ಪ್ರಸನ್ನ ಪೂಜೆ, ಶ್ರೀ ನಾಗ ದೇವರಿಗೆ ಪಂಚವಿಂಶತಿ ಕಲಶ ಸಹಿತ ಮಹಾ ಮಂತ್ರ ಹೋಮ, ಕಲಶಾಭಿಷೇಕ, ಆಶ್ಲೇಷಾಬಲಿ, ಪಲ್ಲಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ 9.30ಕ್ಕೆ ಬ್ರಹ್ಮಕಲಶದ ಬಲಿ ಮಹೋತ್ಸವ, ರಂಗ ಪೂಜೆ ನಡೆಯಲಿದೆ. ಸಂಜೆ 4:30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.
ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್ ಶುಭಾಶಂಸನೆಗೈಯ್ಯುವರು. ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸುವರು. ವಿವಿಧ ಗಣ್ಯರಿಗೆ ಸನ್ಮಾನ ನಡೆಯಲಿದೆ.
ಮೇ 25ರ ಬೆಳಿಗ್ಗೆ ಗಣಪತಿ ಹೋಮ, ಶತರುದ್ರಾಭಿಷೇಕ, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ರಾತ್ರಿ ಮಾರಿ ಮತ್ತು ಗೋಂದ್ಲು ಸೇವೆ ನಡೆಯಲಿದೆ.
ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ ಇರಲಿದೆ ಎಂದು ಅಭಿವೃದ್ಧಿ ಮತ್ತು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಸತೀಶ ಪೂಜಾರಿ ಪೆಲತ್ತೂರು, ಆಡಳಿತ ಮೊಕ್ತೇಸರ ರಮೇಶ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















