ಖ್ಯಾತ ಲೇಖಕ ಮೌನೇಶ್ ಬಡಿಗೇರ್ ಇವರ ‘ಟಪಾಲು ಮನೆ’ ಕೃತಿ ಬಿಡುಗಡೆ

ಉಡುಪಿ: ರಂಗಭೂಮಿ ಉಡುಪಿ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಪ್ರಸಿದ್ಧ ಲೇಖಕ ಮೌನೇಶ್ ಬಡಿಗೇರ್ ಇವರ ‘ಟಪಾಲು ಮನೆ ‘ನಾಟಕ ಕೃತಿ ಭಾನುವಾರ ಬಿಡುಗಡೆ ಹೊಂದಿತು.

ಕೃತಿಯನ್ನು ಯಕ್ಷಗಾನ ಕೇಂದ್ರ ಉಡುಪಿ ಇದರ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಬಿಡುಗಡೆಗೊಳಿಸಿ ಮಾತನಾಡಿ, ಈ ಕೃತಿಯ ರಂಗ ಪ್ರಯೋಗವನ್ನು ಮಾಡಲು ರಂಗಭೂಮಿ ಚಿಂತನೆ ನಡೆಸಬೇಕು. ಇಂತಹ ಅತ್ಯುತ್ತಮ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ರಂಗಭೂಮಿ ಉಡುಪಿ ಸಂಸ್ಥೆಯನ್ನು ಶ್ಲಾಘಿಸಿದ ಅವರು, ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅವರ ತಂಡ ರಂಗಭೂಮಿಯ ನೈಜ ಆಶಯವನ್ನು ಸಹಕಾರಗೊಳಿಸುತ್ತಿದೆ ಎಂದರು.

ಅಗಲಿದ ವಿದ್ವಾಂಸ ಅಂಬಾತನಯ ಮುದ್ರಾಡಿ ಅವರು ರಂಗಭೂಮಿಗೆ ನೀಡಿದ ಕೊಡುಗೆಯನ್ನು ಅವರು ಪ್ರಸ್ತಾಪಿಸಿದರು. ಚಿಂತಕ ಭುವನಪ್ರಸಾದ ಹೆಗ್ಡೆ ಅವರು ಕೃತಿಯನ್ನು ಪರಿಚಯಿಸಿದರು.

ಮಾಹೆ ಮಣಿಪಾಲ ಯೂನಿವರ್ಸಲ್ ಪ್ರೆಸ್ ನ ಅರವಿಂದ್ ಅವರು ಶುಭಾಶಂಸನೆಗೈದರು.

ಕಾರ್ಯಕ್ರಮದಲ್ಲಿ ಕೃತಿಕಾರ ಮೌನೇಶ್ ಬಡಿಗೇರ, ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು ಹಾಗೂ ಎನ್.ಆರ್.ಬಲ್ಲಾಳ್ ಉಪಸ್ಥಿತರಿದ್ದರು.

ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ, ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ಎಸ್ ವಂದಿಸಿದರು.

ಕಾರ್ಯಕ್ರಮದ ಪೂರ್ವದಲ್ಲಿ ಅಂಬಾತನಯ ಮುದ್ರಾಡಿ ಸಂಸ್ಮರಣ ಪುಸ್ತಕ ಪ್ರಶಸ್ತಿ ವಿಜೇತ ಕೃತಿ ಮೌನೇಶ್ ಬಡಿಗೇರ ಅವರ ‘ಅಭಿನಯ ಕಲಿಸಲು ಸಾಧ್ಯವೇ?’ ಬಗ್ಗೆ ವಿಚಾರ ಸಂಕಿರಣ ನಡೆಯಿತು. ಹಿರಿಯ ರಂಗ ನಿರ್ದೇಶಕರುಗಳಾದ ಕೃಷ್ಣಮೂರ್ತಿ ಕವತಾರ್ ಹಾಗೂ ಬಾಸುಮ ಕೊಡಗು ಪಾಲ್ಗೊಂಡರು. ಪ್ರಶಸ್ತಿ ಸಮಿತಿಯ ಸಹ ಸಂಚಾಲಕ ಪ್ರಭಾಕರ್ ಜಿ.ಪಿ. ಕಾರ್ಯಕ್ರಮ ನಿರ್ವಹಿಸಿದರು. ಡಾ. ನಿಕೇತನಾ ವಂದಿಸಿದರು.