ಉಡುಪಿ: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿ. ಮಂಗಳೂರು ಇವರ ನೇತೃತ್ವದಲ್ಲಿ, ಜಲಾನಯನ ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆ ಮತ್ತು ಸ್ಕೋಡ್ವೆಸ್ ಸಂಸ್ಥೆ ಶಿರಸಿ ಇವರ ಸಹಭಾಗೀತ್ವದಲ್ಲಿ ರಚನೆಗೊಂಡ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯು ಡಿ. 2 ಮತ್ತು 3 ರಂದು ಆಯೋಜಿಸುತ್ತಿರುವ “ಮತ್ಸ್ಯ ಮೇಳ” – 2023 ರ ಪೋಸ್ಟರ್ ಅನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಬಿಡುಗಡೆಗೊಳಿಸಿದರು. ತದನಂತರ ಮಾತನಾಡಿದ ಅವರು “ಮತ್ಸ್ಯ ಮೇಳ 2023″ ಅತ್ಯಂತ ಯಶಸ್ವಿಯಾಗಿ ನಡೆಯಲಿ, ಉಡುಪಿಯ ಹಾಗೂ ಸುತ್ತಮುತ್ತಲಿನ ಊರಿನ ಜನತೆಗೆ ಸಾಗರೋತ್ಪನ್ನಗಳ ರಸದೌತಣ ಉಣಬಡಿಸಲು ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿ ಹಮ್ಮಿಕೊಂಡಿರುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರಲ್ಲದೇ ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಾಯ ಸಹಕಾರ ಇರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರ ಉತ್ಪಾದಕರ ಕಂಪನಿಯ ಅಧ್ಯಕ್ಷೆ ವನಜ ಪುತ್ರನ್, ನಿರ್ದೇಶಕರುಗಳಾದ ಜಯಂತಿ ಸಾಲಿಯಾನ್, ನಿರ್ಮಲ ಸಾಲಿಯಾನ್, ವೇದಾವತಿ ಪುತ್ರನ್ ಮತ್ತು ರೇಣುಕಾ ಹಾಗೂ ಮುಖ್ಯ ಕಾರ್ಯನಿರ್ವಾಹಕ ವಿಷ್ಣುಪ್ರಸಾದ್ ಕಾಮತ್ ಉಪಸ್ಥಿತರಿದ್ದರು.