ರಾಷ್ಟ್ರೀಯ ಗಣಿತ ದಿನಾಚರಣೆ: ಡಾ. ಜಿ. ಶಂಕರ್ ಕಾಲೇಜಿನ ಗಣಿತಶಾಸ್ತ್ರ ವಿಭಾಗದ QR Code ಬಿಡುಗಡೆ

ಉಡುಪಿ: ತನ್ನ ಕೊಡುಗೆಗಳ ಮೂಲಕ ಗಣಿತ ಪ್ರಪಂಚದಲ್ಲಿ ಇಂದಿಗೂ ಜೀವಂತವಾಗಿರುವ ವಿಶ್ವದ ಖ್ಯಾತ, ಮೇಧಾವಿ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಜೀವನ ಸಾಧಿಸಬೇಕೆಂಬ ಛಲ ಇರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾದರಿ. ಅವರ ಸಂಶೋಧನೆಗಳಲ್ಲಿ ಅಡಗಿರುವ ಅನೇಕ ಅಧ್ಯಯನಶೀಲ ವಿಷಯಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಸಾಧ್ಯ, ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೀಲಾಬಾಯಿ ಭಟ್ ಹೇಳಿದರು.

ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಇಲ್ಲಿನ ಗಣಿತಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ಶ್ರೀನಿವಾಸ ರಾಮಾನುಜನ್ ಅವರ 136ನೇ ಜನ್ಮದಿನವದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಕುರಿತು ಸಮಗ್ರ ಮಾಹಿತಿಯನ್ನೊಳಗೊಂಡ QR Code ನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್ ಶೆಟ್ಟಿ ಎಸ್ ವಹಿಸಿದ್ದರು.

ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜಿ, ಗಣಿತಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಸುಜಾತ ವಿ ಶೇಟ್ ಮತ್ತು ಡಾ. ರವೀಶ ಎಂ. ಉಪಸ್ಥಿತರಿದ್ದರು.

ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಸೆಮಿನಾರ್, ರಸಪ್ರಶ್ನೆ, ಚಿತ್ರಕಲೆ ಮತ್ತು ಗಣಿತ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶ್ರೀಮತಿ ಅಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿಭಾಗದ ಉಪನ್ಯಾಸಕಿ ಪಲ್ಲವಿ ನಿರೂಪಿಸಿ, ಪ್ರಥಮ ಎಂ.ಎಸ್ಸಿ ವಿದ್ಯಾರ್ಥಿನಿ ಮೋನಿಷಾ ರೆಡ್ಡಿ ವಂದಿಸಿದರು.