ಕರಾವಳಿಯ ಕನಸು ಕ್ರಿಯೇಷನ್ ನಿಂದ ಮತ್ತೊಂದು ಕಿರು ಚಿತ್ರ ಬಿಡುಗಡೆಯಾಗಿ ಯುಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಪ್ರದೀಪ್ ಶೆಟ್ಟಿ ನಿರ್ದೇಶನದ, ಶ್ರೀಶಾ ನಾಯಕ್ ಚಿತ್ರ ಕಥೆವುಳ್ಳ ಈ ತುಳು ಕಿರುಚಿತ್ರವೇ “ದೋಸ್ತಿ ಮಸ್ತಿ”. ಈಗಾಗಲೇ ಕೆಲವೊಂದು ಉತ್ತಮ ಕಿರುಚಿತ್ರಗಳನ್ನು, ವಿಡಿಯೋ ಹಾಡುಗಳನ್ನು ನೀಡಿ ಯುಟ್ಯೂಬ್ ನಲ್ಲಿ ಸದ್ದು ಮಾಡಿದ ಕನಸು ಕ್ರಿಯೇಷನ್ ಇದೀಗ “ದೋಸ್ತಿ ಮಸ್ತಿಯ”ಮೂಲಕ ಗಮನಸೆಳೆಯುವ ಕೆಲಸ ಮಾಡಿದೆ.
ದೋಸ್ತಿಯಲ್ಲಿ ಮಸ್ತಿ ಜಾಸ್ತಿಯಾದರೆ ಆಗುವ ಪರಿಣಾಮವೇನು, ಆ ಮಸ್ತಿ ಹೇಗೆ ಒಬ್ಬ ಯುವಕನ ಜೀವನವನ್ನು ಕೊನೆಗೊಳಿಸುತ್ತದೆ?ಎನ್ನುವುದೇ ಈ ಚಿತ್ರದ ಕಥೆಯ ಮುಖ್ಯ ಅಂಶ. ಅದೇ ಚಿತ್ರದ ಜೀವವೂ ಹೌದು. ಆರಂಭದಲ್ಲಿ ಸಾಮಾನ್ಯವಾಗಿ ಕಾಣಿಸುವ ಚಿತ್ರ ಕೊನೆಗೆ ಮನಸೆಳೆಯುತ್ತದೆ. ಮೊದಲಾರ್ಧ ಅಷ್ಟಾಗಿ ಕಾಡುವ ಅಂಶಗಳೇನೂ ಈ ಚಿತ್ರದಲ್ಲಿಲ್ಲ. ಆದರೆ ಆಮೇಲಾಮೇಲೆ ಚಿತ್ರ ಮನಸ್ಸಿಗೆ ಹತ್ತಿರಾಗುತ್ತದೆ. ಚಿತ್ರ ತಂಡ ಹೇಳುವ ಪ್ರಕಾರ ಇದೊಂದು ನಿಜ ಘಟನೆಯನ್ನಾದರಿತ ಸಿನಿಮಾ ಆಗಿದ್ದು ಯುವಜನತೆಯ ಒಳ್ಳೆಯ ಸಂದೇಶ ಕೊಡುವ ಉದ್ದೇಶ ತಂಡದ್ದು.
ಇಡೀ ಚಿತ್ರವನ್ನು ಇನ್ನಷ್ಟು ಭಾವನಾತ್ಮಕಗೊಳಿಸುವ, ಆಪ್ತವಾಗಿಸುವ ಪ್ರಯತ್ನ ನಡೆಸಬಹುದಿತ್ತು. ಚಿತ್ರದಲ್ಲಿ ಕಲಾವಿದರ ಅಭಿನಯ ಇನ್ನಷ್ಟು ಸಹಜವಾಗಿ ಮೂಡಿಬಂದಿದ್ದರೆ ಚಿತ್ರಕ್ಕೆ ಇನ್ನಷ್ಟು ಜೀವಬರುತ್ತಿತ್ತು. ಜೊತೆಗೆ ಸಿನಿಮಾಟೋಗ್ರಫಿಯಲ್ಲಿಯೂ ಇನ್ನಷ್ಟು ವೃತ್ತಿಪರತೆ ಇದ್ದರೆ ಚಿತ್ರ ಇನ್ನಷ್ಟು ಮನ ಗೆಲ್ಲುತ್ತಿತ್ತು. ಆದರೂ ಒಂದೊಳ್ಳೆ ಸಂದೇಶವುಳ್ಳ ಕಿರುಚಿತ್ರ ಇದಾಗಿದ್ದು ಒಂದು ರೀತಿ ಗಮನಸೆಳೆಯುವಲ್ಲಿ ಯಶಸ್ವಿಯೇ ಆಗಿದೆ.
ಚಿತ್ರ ತಂಡ ಇನ್ನಷ್ಟು ಉತ್ತಮ ಚಿತ್ರಗಳನ್ನು ಕೊಡಲಿ, ಎಲ್ಲಕ್ಕಿಂತಲೂ ಹೆಚ್ಚಾಗಿ ಈ ತಂಡದಿಂದ ಇನ್ನಷ್ಟು ಹೊಸ ಕಲಾವಿದರು ಮುನ್ನೆಲೆಗೆ ಬರಲಿ. ತುಳು ಕಿರುಚಿತ್ರಗಳು ಸಾಮಾನ್ಯವಾಗಿ ಬಳಸುವ ಹಾಸ್ಯ, ಪ್ರೇಮ ಸನ್ನಿವೇಶಗಳನ್ನು ಬದಿಗೊತ್ತಿ ವಿಭಿನ್ನ ಪ್ರೀತಿ, ಕರಾವಳಿಯ ಸಾಂಸ್ಕೃತಿಕ ಆಚರಣೆ, ಸೊಗಡುಗಳನ್ನು ಮುಂದಿನ ಚಿತ್ರಗಳಲ್ಲಿ ಅಳವಡಿಸುವ ಕುರಿತು ಈ ತಂಡ ಯೋಚಿಸಲಿ ಎನ್ನುವುದಷ್ಟೇ ಆಶಯ
*ಪ್ರಸಾದ್ ಶೆಣೈ
ದೋಸ್ತಿ ಮಸ್ತಿ ಕಿರು ಚಿತ್ರ ನೋಡಲು ಈ ಲಿಂಕ್ ಕ್ಲಿಕ್ ಮಾಡಿ