ನವದೆಹಲಿ: ಸಂಸತ್ತಿನ ಮೇಲೆ 2001 ರ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ದಿನವಾದ ಡಿಸೆಂಬರ್ 13 ರಂದು ನಡೆದ ಸಂಸತ್ತಿನ ಭದ್ರತಾ ಉಲ್ಲಂಘನೆಯ ಪ್ರಕರಣ ಕುರಿತು ದೆಹಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಘಟನೆಯ ‘ಮಾಸ್ಟರ್ ಮೈಂಡ್’ ಲಲಿತ್ ಝಾನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಮ್ಮ ಯೋಜನೆಯ ವಿವರಗಳನ್ನು ಪೊಲೀಸರಿಗೆ ಬಹಿರಂಗಪಡಿಸಿರುವ ಆತ, ಇದರಲ್ಲಿ ‘ಪ್ಲಾನ್ ಎ ಮತ್ತು ಪ್ಲಾನ್ ಬಿ’ ಕೂಡ ಸೇರಿತ್ತು ಎಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಝಾ ಮತ್ತು ಬಂಧಿತರಾಗಿರುವ ಇತರ ಐವರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಬಯಸಿದ್ದರು. ಆರೋಪಿಯು ಯಾವುದೇ ಶತ್ರು ದೇಶ ಅಥವಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆತನನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆರೋಪಿಗಳ ಮೊಬೈಲ್ ಫೋನ್‌ಗಳು ಪೊಲೀಸರ ಬಳಿ ಇಲ್ಲದಿರುವುದು ಪ್ರಕರಣದ ದೊಡ್ಡ ಸವಾಲಾಗಿದೆ. ಇದು ಪಿತೂರಿಯ ಮೂಲವನ್ನು ಪತ್ತೆಹಚ್ಚಲು ಮತ್ತು ಹೆಚ್ಚಿನ ಜನರು ಭಾಗಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ. ಪೊಲೀಸರು ಆರೋಪಿಗಳನ್ನು ಸಂಸತ್ತಿಗೆ ಕರೆದೊಯ್ದು ಇಂದು ಅಥವಾ ನಾಳೆ ದೃಶ್ಯವನ್ನು ಮರುಸೃಷ್ಟಿಸುವ ಸಾಧ್ಯತೆಯಿದೆ.
ಏತನ್ಮಧ್ಯೆ, ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ದಳವು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದೆ. ಗಮನಾರ್ಹವಾಗಿ, ಸಿಂಹ ಅವರ ಕಚೇರಿಯಿಂದ ನೀಡಲಾದ ಪಾಸ್ ಮೂಲಕ ಆರೋಪಿಗಳು ಲೋಕಸಭೆಯ ಸಂದರ್ಶಕರ ಗ್ಯಾಲರಿಗೆ ಪ್ರವೇಶ ಪಡೆದಿದ್ದಾರೆ.
ಲೋಕಸಭೆಯ ಚೇಂಬರ್ ನೊಳಗೆ ಜಿಗಿದ ಇಬ್ಬರು ಆರೋಪಿಗಳಲ್ಲಿ ಒಬ್ಬನಾದ ಸಾಗರ್ ಶರ್ಮಾ ಆರಂಭದಲ್ಲಿ ತಾವು ತಮಗೇ ಬೆಂಕಿ ಹಚ್ಚಲು ಯೋಜಿಸಿದ್ದೆವು ಆದ ಆಮೇಲೆ ಈ ಆಲೋಚನೆಯನ್ನು ಕೈಬಿಟ್ಟೆವು ಎಂದು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.