ಮಾಸ್ಟರ್​ ಬ್ಲಾಸ್ಟರ್ ಸಚಿನ್​ ತೆಂಡೂಲ್ಕರ್‌ ಮೊಟ್ಟ ಮೊದಲ ಶತಕಕ್ಕೆ 33 ವರ್ಷ!

ನವದೆಹಲಿ: ಇಂದು ಸಚಿನ್​ ತೆಂಡೂಲ್ಕರ್​ ‘ಕ್ರಿಕೆಟ್​ ದೇವರು’ ಎಂದೇ ಕರೆಸಿಕೊಳ್ಳುತ್ತಿದ್ದಾರೆ. ಆದರೆ, 1990ರಲ್ಲಿ 17 ವರ್ಷದ ಈ ಯುವ ಆಟಗಾರನನ್ನು ಎದುರಾಳಿ ತಂಡದ ಬೌಲರ್​ಗಳು ಗೇಲಿ ಮಾಡುತ್ತಿದ್ದರು ಎಂಬುದು ಗಮನಾರ್ಹ.’ಶತಕಗಳ ಶತಕ’ ದಾಖಲಿಸಿದ ‘ಜಾಗತಿನ ಕ್ರಿಕೆಟ್‌ ಮಾಂತ್ರಿಕ’ ಸಚಿನ್​ ತೆಂಡೂಲ್ಕರ್​ ಅವರ ಬ್ಯಾಟ್‌ನಿಂದ ಮೊದಲ 100 ರನ್​ ದಾಖಲಾಗಿ ಇಂದಿಗೆ 33 ವರ್ಷವಾಗುತ್ತಿದೆ.
​ ಶತಕಗಳ ಶತಕ ದಾಖಲಿಸಿದ ಸಚಿನ್​ ತೆಂಡೂಲ್ಕರ್​ ಅವರ ಮೊದಲ ಶತಕ 33 ವರ್ಷಗಳ ಹಿಂದೆ ಇದೇ ದಿನ ದಾಖಲಾಗಿತ್ತು.

1990ರ ಆಗಸ್ಟ್​ 14ರಂದು ಇಂಗ್ಲೆಂಡ್ ತಂಡದ​ ವಿರುದ್ಧ ಸಚಿನ್​ ತಮ್ಮ ಮೊದಲ ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದರು. ಈ ಮೂಲಕ ಭಾರತೀಯ ಕ್ರಿಕೆಟ್​ ಇತಿಹಾಸದ ಪುಟದಲ್ಲಿ ಶತಕದ ಖಾತೆ ತೆರೆದು ದಾಖಲೆ ನಿರ್ಮಿಸಲು ಅಣಿಯಾಗಿದ್ದರು. ಅಂದಿನ ಭಾರತ ತಂಡದ ಉದಯೋನ್ಮುಖ ಪ್ರತಿಭೆಯ ಆಟಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಇಂದು ಅವರ ಆಟದ ಸೊಗಸನ್ನು ನೆನಪಿಸುವ ಐತಿಹಾಸಿಕ ಕ್ಷಣ
17ರ ಪೋರ ಇಂಗ್ಲೆಂಡ್​ನ ದಿಗ್ಗಜ ಬೌಲರ್​ಗಳ ಬೆಂಕಿ ಚೆಂಡುಗಳಿಗೆ ಲಂಡನ್​ನ ಓಲ್ಡ್​ ಟ್ರಾಫರ್ಡ್​ ಮೈದಾನದಲ್ಲಿ ತಕ್ಕ ಉತ್ತರ ನೀಡಿದ್ದ. 189 ಎಸೆತಗಳನ್ನು​ ಎದುರಿಸಿದ ಸಚಿನ್​ 17 ಬೌಂಡರಿಗಳ ಸಹಾಯದಿಂದ 119 ರನ್ ಪೇರಿಸಿದ್ದರು. ಆದರೆ ಈ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತ್ತು. ಪಂದ್ಯ ಡ್ರಾದಲ್ಲಿ ಕೊನೆಗೊಂಡರೂ ಸಚಿನ್​ ಆಟ ಎಲ್ಲರ ಗಮನ ಸೆಳೆದಿತ್ತು. ಇಂದು ತಮ್ಮ ವೃತ್ತಿಜೀವನದ ಶ್ರದ್ಧೆಗಾಗಿ ‘ದೇವರು’ ಎಂದು ಕರೆಸಿಕೊಳ್ಳುತ್ತಿದ್ದಾರೆ. ‘ಮಾಸ್ಟರ್​ಬ್ಲಾಸ್ಟರ್​’ ಚೊಚ್ಚಲ ಶತಕವನ್ನು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಸ್ಮರಿಸಿದ್ದಾರೆ.

ಒಟ್ಟು 664 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಸಚಿನ್​ 100 ಶತಕಗಳು ಮತ್ತು 164 ಅರ್ಧಶತಕಗಳೊಂದಿಗೆ 48.52 ರ ಸರಾಸರಿಯಲ್ಲಿ ಮತ್ತು 67ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 34,357 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಸಿಡಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ತೆಂಡೂಲ್ಕರ್​ 463 ಏಕದಿನ ಪಂದ್ಯಗಳನ್ನು ಆಡಿದ್ದು, 44.83ರ ಸರಾಸರಿಯಲ್ಲಿ 86.23ರ ಸ್ಟ್ರೈಕ್​ರೇಟ್​ನಿಂದ 18,426 ರನ್​ ಗಳಿಸಿದ್ದಾರೆ. ಈ ಮಾದರಿಯಲ್ಲಿ 49 ಶತಕ ಮತ್ತು 96 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಅಜೇಯ 200 ರನ್​ ಅತ್ಯುತ್ತಮ ಸ್ಕೋರ್ ಆಗಿದೆ. ಅಲ್ಲದೇ ಏಕದಿನದಲ್ಲಿ ದ್ವಿಶತಕ ಗಳಿಸಿದ ಮೊದಲ ಆಟಗಾರನೂ ಹೌದು. ಹಾಗೆಯೇ ಎರಡೂ ಸ್ವರೂಪಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೂ ಇವರೇ. ತೆಂಡೂಲ್ಕರ್ ಆಡಿದ ಒಂದು ಟಿ20ಯಲ್ಲಿ 10 ರನ್ ಗಳಿಸಿದ್ದಾರೆ.2013ರಲ್ಲಿ ನಿವೃತ್ತಿಯತನಕ ಸಚಿನ್ 200 ಟೆಸ್ಟ್‌ಗಳಲ್ಲಿ ಭಾರತ ತಂಡ ಪ್ರತಿನಿಧಿಸಿದ್ದಾರೆ. ಇದು ಒಬ್ಬ ಆಟಗಾರ ಆಡಿದ ಅತಿ ಹೆಚ್ಚಿನ ಪಂದ್ಯಗಳ ಸಂಖ್ಯೆ. ಸಚಿನ್​ ಟೆಸ್ಟ್​ ಮಾದರಿಯಲ್ಲಿ 53.78ರ ಸರಾಸರಿಯಲ್ಲಿ 15,921 ರನ್ ಗಳಿಸಿದ್ದು, ಅವರ ಹೆಸರಿನಲ್ಲಿ 51 ಶತಕ ಮತ್ತು 68 ಅರ್ಧಶತಕಗಳಿವೆ. ಅಜೇಯ 248 ಅವರ ಅತ್ಯುತ್ತಮ ಸ್ಕೋರ್.