ಉಡುಪಿ: ಛತ್ತೀಸ್ ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರನ್ನು ಸುಳ್ಳು ಆರೋಪ ಹೊರಿಸಿ ಮೇಲೆ ಬಂಧಿಸಿರುವ ಹಾಗೂ ದೌರ್ಜನ್ಯ ನಡೆಸಿರುವ ಕ್ರಮವನ್ನು ಖಂಡಿಸಿ ಕಥೊಲಿಕ್ ಸಭಾ ಉಡುಪಿ ಪ್ರದೇಶದ ನೇತೃತ್ವದಲ್ಲಿ ಇತರ ಸಹಭಾಗಿ ಸಂಘಟನೆಗಳ ಸಹಕಾರದೊಂದಿಗೆ ಸೋಮವಾರ ಸಂಜೆ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಾವಿರಾರು ಸಂಖ್ಯೆಯಲ್ಲಿ ನೆರೆದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಚಿಂತಕರಾದ ಗಣನಾಥ್ ಎಕ್ಕಾರ್ ದೇಶದಾದ್ಯಂತ 30000ಕ್ಕೂ ಅಧಿಕ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಂದ್ದು 50ಲಕ್ಷ ಜನರು ಅವುಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಅದರಲ್ಲಿ 48ಲಕ್ಷ ಮಂದಿ ಪ್ರಯೋಜನ ಪಡೆಯುವವರು ಇತರ ಧರ್ಮದವರಾಗಿದ್ದಾರೆ.

ಕ್ರೈಸ್ತರು ದೇಶದ ಅಭಿವೃದ್ಧಿಗೆ ಸ್ವಾತಂತ್ರ್ಯ ಪೂರ್ವದಿಂದಲೇ ತಮ್ಮ ಕೊಡುಗೆಯನ್ನು ನೀಡಿಕೊಂಡು ಬಂದಿದ್ದಾರೆ. ಸಾಹಿತ್ಯಕ್ಕೆ ಮೊದಲ ಕೊಡುಗೆ ನೀಡಿದ್ದು ಕೂಡ ಕ್ರೈಸ್ತ ಮಿಷನರಿಗಳಾಗಿದ್ದಾರೆ. ಸಂವಿಧಾನದ ಮೂಲ ತತ್ವಗಳಿಗೆ ಚ್ಯುತಿ ಬರದಂತೆ ರಕ್ಷಿಸಬೇಕಾದ ಅಗತ್ಯವಿದ್ದು, ಎಲ್ಲರೂ ಸಮಾನರು ಎಂಬ ತತ್ವದಂತೆ ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಅನುಸರಿಸುವ ಹಕ್ಕನ್ನು ಹೊಂದಿದೆ. ಛತ್ತೀಸ್ ಘಡದ ಘಟನೆಯಲ್ಲಿ ಕ್ರೈಸ್ತ ಧರ್ಮ ಭಗಿನಿಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೆಲಸವಾಗಿದ್ದು ಅದನ್ನು ಪ್ರತಿಯೊಬ್ಬ ಭಾರತೀಯ ಕೂಡ ಖಂಡಿಸಲೇ ಬೇಕಾಗಿದೆ. ಸಹೋದರತೆ ಮತ್ತು ಸಹಬಾಳ್ವೆ ಸಂವಿಧಾನದ ಮೂಲ ತತ್ವವಾಗಿದ್ದು, ಅದಕ್ಕೆ ಧಕ್ಕೆ ಬಂದಾಗ ದೇಶ ಪ್ರಗತಿಯನ್ನು ಕಾಣಲು ಸಾಧ್ಯವಿಲ್ಲ. ಮಾನವ ಹಕ್ಕುಗಳಿಗೆ ಧಕ್ಕೆ ಬಂದಾಗ ಅದರ ವಿರುದ್ದ ಹೋರಾಟ ಮಾಡಲೇ ಬೇಕಾದ ಅವಶ್ಯಕತೆ ಇದೆ ಎಂದರು.

ಪತ್ರಕರ್ತೆ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರಯ್ಯ ಅಂಜುಮ್ ಮಾತನಾಡಿ ಶಾಂತಿಯಿಂದ ಯಾವುದೇ ಹೋರಾಟವನ್ನು ಗೆಲ್ಲಲು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು ಗಾಂಧಿಜಿ. ಅದೇ ಮಾರ್ಗದಲ್ಲಿ ನಡೆಯುವವರು ಕ್ರೈಸ್ತ ಸಮುದಾಯದವರಾಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಬಹುದು. ಛತ್ತೀಸ್ ಘಡದಲ್ಲಿ ಇಬ್ಬರು ಧರ್ಮಭಗಿನಿಯರು ಕಷ್ಠದಲ್ಲಿದ್ದ ಇಬ್ಬರು ಮಹಿಳೆಯರ ನೋವಿಗೆ ಸ್ಪಂದಿಸಿದ್ದೆ ಬಲಪಂಥಿಯ ಸಂಘಟನೆಗಳಿಗೆ ಮಹಾ ಪಾಪ ಎಂಬಂತೆ ಕಂಡಿದೆ. ರೋಗಿಗಳ ಸೇವೆಗೆ, ಶಿಕ್ಷಣವನ್ನು ಎತ್ತಿ ಹಿಡಿದು ಭಾರತ ವಿಶ್ವದಲ್ಲಿ ತಲೆ ಎತ್ತಿ ನಿಲ್ಲಲು ದಾರಿ ತೋರಿದವರು ಕ್ರೈಸ್ತ ಸಮುದಾಯ. ಬೇಟಿ ಪಡಾವೋ ಬೇಟಿ ಬಚಾವೊ ಎನ್ನುವವರು ಇಂದು ಕ್ರೈಸ್ತ ಧರ್ಮಭಗಿನಿಯರ ನೋವಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕಾಗಿದೆ. ಶಾಂತಿಯನ್ನು ಜಪಿಸಿದ ಕ್ರೈಸ್ತ ಸಮುದಾಯಕ್ಕೆ ಮಾಡಿದ ಹಿಂಸೆ ಖಂಡನೀಯ. ಅಲ್ಪಸಂಖ್ಯಾತರ ವಿರುದ್ದ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ಭಾರತದ ಸಂವಿಧಾನದ ಅಡಿಯಲ್ಲೇ ಪ್ರತಿಭಟಿಸಿದ್ದೇವೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷರಾದ ರೊನಾಲ್ಡ್ ಆಲ್ಮೇಡಾ ಬಂಧಿತ ಧರ್ಮಭಗಿನಿಯರನ್ನು ಷರತ್ತುಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ ಆದರೆ ಅವರ ಮೇಲೆ ಹಾಕಲಾಗಿರುವ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆದಿಲ್ಲ. ಅಲ್ಲದೆ ಧರ್ಮಭಗಿನಿಯರನ್ನು ಛತ್ತೀಸ್ ಘಡದ ದುರ್ಗ ರೈಲು ನಿಲ್ದಾಣದಲ್ಲಿ ಬಲಪಂಥೀಯ ಸಂಘಟನೆಗಳು ಅಮಾನವೀಯವಾಗಿ ನಡೆಸಿಕೊಂಡಿದ್ದು ಆ ಸಂಘಟನೆಗಳ ವಿರುದ್ದ ಕೂಡ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ಇದೊಂದು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು ಕ್ರೈಸ್ತ ಸಮುದಾಯದ ಬೇಡಿಕೆಗಳಿಗೆ ಛತ್ತೀಸ್ ಘಡದ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಸೂಕ್ತವಾಗಿ ಸ್ಪಂದಿಸಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಇಂದಿನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಕುಲಪತಿ ವಂ|ಸ್ಟೀಫನ್ ಡಿಸೋಜಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ, ಧಾರ್ಮಿಕ ಗುರುಗಳ ಎಪಿಸ್ಕೋಪಲ್ ವಿಕಾರ್ ವಂ|ಜ್ಯೋ ತಾವ್ರೊ, ಸಹಬಾಳ್ವೆಯ ಪ್ರೋ. ಫಣಿರಾಜ್, ಭಾರತೀಯ ಕಥೊಲಿಕ್ ಯುವ ಸಂಚಾಲನ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷರಾದ ನಿತಿನ್ ಬಾರೆಟ್ಟೊ, ಕಥೊಲಿಕ್ ಸಭಾ ಕಾರ್ಯದರ್ಶಿ ಜೊಯೆಲ್, ಬ್ರಹ್ಮಾವರ ಸಿರಿಯನ್ ಒರ್ಥೊಡಕ್ಸ್ ಸಭೆಯ ವಿಕಾರ್ ಜನರಲ್ ವಂ| ಎಮ್ ಸಿ ಮಥಾಯಿ, ಕರ್ನಾಟಕ ಸದರ್ನ್ ಡಯಾಸಿಸ್ ಉಡುಪಿ ಎರಿಯಾ ಚೇರಮೆನ್ ಪಾಸ್ಟರ್ ಕಿಶೋರ್, ವಿವಿಧ ಸಭೆಗಳ ಧರ್ಮಗುರುಗಳು, ಧರ್ಮಭಗಿನಿಯರು, ಸಾವಿರಾರು ಸಂಖ್ಯೆಯಲ್ಲಿ ಸೇರಿದ ಕ್ರೈಸ್ತ ಬಂಧುಗಳು ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಿಂದ ಸಂಗ್ರಹಿಸಿದ ಸಹಿಗಳ ಮೂಲಕ ದೇಶದ ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿಗಳಿಗೆ, ಛತ್ತೀಸ್ ಘಡದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.ಮನವಿಯನ್ನು ನಿಯೋಜಿತ ಅಧ್ಯಕ್ಷರಾದ ಲೂಯಿಸ್ ಡಿಸೋಜಾ ವಾಚಿಸಿದರು, ಸುಗಮ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸಿಲ್ವಿಯಾ ಸುವಾರಿಸ್ ವಂದಿಸಿದರು, ಸಾಮಾಜಿಕ ಕಾರ್ಯಕರ್ತೆ ವೆರೋನಿಕಾ ಕರ್ನೆಲಿಯೋ ಕಾರ್ಯಕ್ರಮ ನಿರೂಪಿಸಿದರು.
ಪ್ರಮುಖ ಬೇಡಿಕೆಗಳುಧರ್ಮಭಗಿನಿಯರ ಮೇಲೆ ಹೇರಲಾದ ಎಲ್ಲಾ ಕೇಸುಗಳನ್ನು ರದ್ದುಗೊಳಿಸಬೇಕು. ಬಲಪಂಥೀಯ ಸಂಘಟನೆಗಳಿಂದ ನಡೆದ ದೌರ್ಜನ್ಯದ ಕುರಿತು ಸೂಕ್ತವಾದ ತನಿಖೆ ನಡೆಸಬೇಕು ಮತ್ತು ಘಟನೆಗೆ ಕಾರಣರಾದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕು. ಅಲ್ಪ ಸಂಖ್ಯಾತರ ಮಾನವ ಹಕ್ಕು ಹಾಗೂ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ನಿಲ್ಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಶಿಸ್ತು ಬದ್ಧೆ ಪ್ರತಿಭಟನೆಕ್ಲಪ್ತ ಸಮಯಕ್ಕೆ ಆರಂಭವಾದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಪ್ರತಿಭಟನಾಕಾರರು ಸೇರಿದ್ದರೂ ಕೂಡ ಯಾವುದೇ ಉದ್ರೇಕಕಾರಿ ಘೋಷಣೆಗಳಿಗೆ ಅವಕಾಶ ನೀಡಿದೆ ಶಾಂತಿಯುತವಾಗಿ ಕೇವಲ ಒಂದು ಗಂಟೆಯಲ್ಲಿ ಮುಗಿಸಲಾಯಿತು. ಸ್ವಯಂ ಸೇವಕರೇ ಜನಸ್ತೋಮವನ್ನು ಅಚ್ಚುಕಟ್ಟಾಗಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ವ್ಯವಸ್ಥಿತವಾಗಿ ನಡೆಯಲು ಸಹಕರಿಸಿದರು.












