ಭದೇರ್ವಾ ಪಟ್ಟಣದ ವಾಸುಕಿ ನಾಗ ದೇವಸ್ಥಾನ ವಿಧ್ವಂಸ ಪ್ರಕರಣ: ಜಮ್ಮುವಿನಲ್ಲಿ ಬೃಹತ್ ಪ್ರತಿಭಟನೆ

ಜಮ್ಮು: ದೋಡಾ ಜಿಲ್ಲೆಯ ಭದೇರ್ವಾ ಪಟ್ಟಣದ ವಾಸುಕಿ ನಾಗ ದೇವಾಲಯವನ್ನು ಅಪವಿತ್ರಗೊಳಿಸಿದ ಒಂದು ದಿನದ ನಂತರ ಸೋಮವಾರ ಜಮ್ಮುವಿನಲ್ಲಿ ಬೃಹತ್ ಪ್ರತಿಭಟನೆ ಭುಗಿಲೆದ್ದಿದೆ. ಹಿಂದೂ ಸಮುದಾಯಕ್ಕೆ ಸೇರಿದ ಪ್ರತಿಭಟನಾಕಾರರು “ಹಿಂದೂ ದೇವಾಲಯ ಧ್ವಂಸಗೊಳಿಸುವುದನ್ನು ನಿಲ್ಲಿಸಿ” ಎಂದು ಬರೆಯಲಾದ ಫಲಕವನ್ನು ಹಿಡಿದುಕೊಂಡು ಧರಣಿ ನಡೆಸಿದ್ದಾರೆ.

ಧರ್ಮಾರ್ಥ ಟ್ರಸ್ಟ್‌ನ ಒಡೆತನದಲ್ಲಿರುವ ಭದೇರ್ವಾ ಪಟ್ಟಣದ ಕೈಲಾಸ ಕುಂಡದ ವಾಸುಕಿ ನಾಗ ದೇಗುಲದಲ್ಲಿ ಶ್ರೀ ವಾಸುಕಿ ನಾಗರಾಜ ಮಹಾರಾಜರ ವಿಗ್ರಹಗಳನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಪಟ್ಟಣದ ಹಲವೆಡೆ ರಸ್ತೆ ತಡೆ ನಡೆಸಿದ್ದಾರೆ.

ಧರ್ಮಾರ್ಥ ಟ್ರಸ್ಟ್‌ನ ಟ್ರಸ್ಟಿಯಾಗಿರುವ ಕೊನೆಯ ಡೋಗ್ರಾ ದೊರೆ ಮಹಾರಾಜ ಹರಿಸಿಂಗ್ ಅವರ ಮೊಮ್ಮಗ ವಿಕ್ರಮಾದಿತ್ಯ ಸಿಂಗ್ , ದೇವಸ್ಥಾನದ ಧ್ವಂಸ ಪ್ರಕರಣವನ್ನು ಸ್ಥಳೀಯ ಆಡಳಿತದೊಂದಿಗೆ ಪ್ರಸ್ತಾಪಿಸಿದ್ದಾರೆ.

“ಶ್ರೀ ವಾಸುಕಿ ನಾಗ ಮಂದಿರವನ್ನು ಸ್ಥಳೀಯ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂಬ ಆಘಾತಕಾರಿ ವರದಿಗಳ ಬಗ್ಗೆ ತಿಳಿದುಬಂದಿದೆ. ಈ ಪ್ರಕರಣವನ್ನು ಶೀಘ್ರವಾಗಿ ತನಿಖೆ ಮಾಡಲು ಮತ್ತು ತಪ್ಪಿತಸ್ಥರನ್ನು ನ್ಯಾಯಾಂಗಕ್ಕೆ ತರಲು ನಾನು ವೈಯಕ್ತಿಕವಾಗಿ ದೋಡಾದ ಡಿಸಿ ಮತ್ತು ಎಸ್‌ಎಸ್‌ಪಿ ಅವರೊಂದಿಗೆ ಮಾತನಾಡಿದ್ದೇನೆ. ಸಾರ್ವಜನಿಕರು ಸಂಯಮದಿಂದಿದ್ದು ಕೋಮು ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡುತ್ತೇನೆ” ಎಂದು ವಿಕ್ರಮಾದಿತ್ಯ ಹೇಳಿದ್ದಾರೆ.

ಕೈಲಾಶ್ ಕುಂಡ್‌ನಲ್ಲಿರುವ ವಾಸುಕಿ ನಾಗ ಮಂದಿರವು 13,500 ಅಡಿ ಎತ್ತರದಲ್ಲಿದೆ. ಜಮ್ಮು ಮತ್ತು ಕಾಶ್ಮೀರ ಧರ್ಮಾರ್ಥ ಟ್ರಸ್ಟ್ ಮತ್ತು ಸ್ಥಳೀಯ ಹಿಂದೂ ಸಮಿತಿಗಳ ಬೆಂಗಾವಲಿನಲ್ಲಿ ದೇವಸ್ಥಾನದ ವಾರ್ಷಿಕ ಕೈಲಾಸ ಯಾತ್ರೆ ನಡೆಯುತ್ತದೆ. ಇದಕ್ಕೂ ಮುಂಚೆ ಸಿದ್ರಾ , ಶಂಖಪಾಲ (ರಾಂಬನ್) ದೇವಸ್ಥಾನಗಳಲ್ಲೂ ವಿಧ್ವಂಸ ಕೃತ್ಯಗಳು ನಡೆದಿವೆ ಎನ್ನಲಾಗಿದೆ.

ಏತನ್ಮಧ್ಯೆ, ಭದರ್ವಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ಸತ್ಯಾಸತ್ಯತೆ ತಿಳಿಯಲು ಈಗಾಗಲೇ ತಂಡವನ್ನು ಎತ್ತರದ ಕೈಲಾಶ್ ಕುಂಡ್ ಸರೋವರಕ್ಕೆ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.