ಕಾರ್ಕಳ: ಅಲ್ಪಸ್ವಲ್ಪ ಮಳೆ, ಆಗಾಗ ಮಿಂಚುತ್ತಿರುವ ಸಿಡಿಲು, ಬೇಸಗೆಯಲ್ಲಿ ಉರಿದ ಬಿಸಿಲಿಗೆ ಕಾದು ಕೆಂಡವಾದ ಭೂಮಿ ತಣ್ಣಗಾಗುತ್ತಿದ್ದು, ಈ ನಡುವೆ ಮಳೆಗಾಲದ ಪ್ರಥಮ ಪ್ರಾಕೃತಿಕ ಬಳುವಳಿ ಎಂಬಂತಿದೆ ಈ ಕಲ್ಲಣಬೆ. ವಾಡಿಕೆ ಪ್ರಕಾರ ಸಿಡಿಲು ಸಹಿತ ಮಳೆಗಾಲ ಆರಂಭವಾಗಿ ತರಗೆಲೆಗಳು ಕೊಳೆಯುವ ಸ್ಥಿತಿ ತಲುಪುತ್ತಿದ್ದಂತೆ ಈ ಕಲ್ಲಣಬೆ ತಲೆಯೆತ್ತಲು ಆರಂಭಿಸುತ್ತದೆ. ಮಳೆಯ ಸೀಸನ್ ಆರಂಭವಾಗುತ್ತಲೇ ತಾಲೂಕಿನ ರೆಂಜಾಳ ಹಾಗೂ ಸುತ್ತಮುತ್ತಲಿನ ಭಾಗದಿಂದ ಈ ಕಲ್ಲಣಬೆ ಕಾರ್ಕಳ ಪೇಟೆಯನ್ನು ಪ್ರವೇಶಿಸಲಾರಂಭಿಸುತ್ತದೆ. ಬಲು ಅಪರೂಪದ ಈ ರುಚಿಕರವಾದ ಕಲ್ಲಣಬೆ ಖರೀದಿಗೆ ಜನತೆ ಮುಗಿಬೀಳುವ ದೃಶ್ಯಗಳು ಕಂಡುಬರುತ್ತವೆ.
ಪಶ್ಚಿಮ ಘಟ್ಟ ತಪ್ಪಲು ಪ್ರದೇಶದ ಗ್ರಾಮಗಳಲ್ಲಿನ ಹಾಡಿಗಳಲ್ಲಿ ಅಣಬೆ ದೊರೆಯುವುದು ವಿಶೇಷವಾಗಿರುವುದರಿಂದ ಬೇಡಿಕೆ ಹೆಚ್ಚಿದೆ. ಪ್ರಕೃತಿಯ ಸಹಜ ಪ್ರಕ್ರಿಯೆಯಿಂದ ಉದಯಿಸುವ ಈ ಅಣಬೆ, ರುಚಿಕರವಾಗಿದ್ದು, ಅಂತರಾಜ್ಯ ಮತ್ತು ವಿದೇಶದಲ್ಲಿ ನೆಲೆಸಿರುವ ಈ ಭಾಗದ ಜನತೆಯ ಮನೆಗಳಿಗೂ ಈ ಅಣಬೆ ರವಾನೆಯಾಗುವುದುಂಟು. ಆದರೆ ಅತೀ ಕಡಿಮೆ ದಿನಗಳ ಕಾಲ ಬಾಳುವ ಈ ಅಣಬೆ ಮಾಂಸ ಮತ್ತು ಸಸ್ಯಹಾರಕ್ಕೆ ಪರ್ಯಾಯವಾದ ಆಹಾರ ಎಂಬುವುದು ಕೂಡಾ ಇನ್ನೊಂದು ಸ್ಪೆಷಾಲಿಟಿ.
ಕಿಲೋ..ಗೆ 4೦೦ರಿಂದ 5೦೦ರೂ…!
ಮಾರಾಟಕ್ಕೆ ಬಂದದ್ದೆ ಬರೇ ಕಡಿಮೆ. ಈ ಬಾರಿಯೂ ೩೫೦ರಿಂದ ೪೦೦ರೂ. ಆರಂಭಿಕ ದರ ನಿಗದಿಯಾಗಿದೆ. ಆದರೂ ಬೇಕೆಂದಾಗ ಸಿಗದ ಈ ಕಲ್ಲಣಬೆಗೆ ಬೇಡಿಕೆ ಅಷ್ಟಿಷ್ಟಲ್ಲ. ಮುಂಗಡವಾಗಿ ಬುಕ್ಕಿಂಗ್ ಮಾಡಿದರೂ ಕಳೆದ ವರ್ಷವೇ ನಿರೀಕ್ಷಿತವಾದ ಕಲ್ಲಣಬೆ ಪೇಟೆಗೆ ಬಂದಿಲ್ಲ. ಮಳೆಗಾಲದಲ್ಲಿ ಅಣಬೆಯ ಲಭ್ಯತೆ ಎಷ್ಟಿರಲಿದೆ ಎನ್ನುವುದು ಕಾದುನೋಡಬೇಕಿದೆ.
ಅಣಬೆ ಹೆಕ್ಕುವವರೇ ಇಲ್ಲ :
ಗುಡ್ಡಕಾಡು ಪ್ರದೇಶದಲ್ಲಿ ತರಗೆಲೆಗಳು ಕೊಳೆತ ಸ್ಥಳ, ಅದರಲ್ಲೂ ಬೋಗಿ ಮರಗಳ ಬುಡಭಾಗ, ಜತೆಗೆ ಒಂದು ರೀತಿಯ ಮರಳು ವಿಧದ ಮಣ್ಣಿನಲ್ಲಿ ಈ ಕಲ್ಲಣಬೆ ತಲೆ ಎತ್ತುತ್ತದೆ. ಅದನ್ನು ಹುಡುಕುವುದೂ ಕೂಡಾ ಒಂದು ಕಲೆಯೇ ಹೌದು. ಈ ಕಲ್ಲಣಬೆಗಳು ಎಲ್ಲಿ ಹುಟ್ಟುತ್ತವೆ ಎಂಬ ಬಗ್ಗೆ ಮಾಹಿತಿಯಿರುವವರು ಮಾತ್ರ ಹೆಕ್ಕ ಬಲ್ಲರು. ಹಳೆ ತಲೆಮಾರಿನ ಹಿರಿಯರು ಅದನ್ನು ಗುರುತಿಸಿ ಹೆಕ್ಕಿ ವ್ಯಾಪಾರ ನಿರ್ವಹಿಸುತ್ತಿದ್ದಾರೆ ಹೊರತು, ಹೊಸಬರು ಈ ಬಗ್ಗೆ ಆಸಕ್ತಿ ವಹಿಸುತ್ತಿರುವುದು ಕಡಿಮೆ.
ಗ್ರಾಮೀಣ ಪ್ರದೇಶದಲ್ಲಿ ಹಲವೆಡೆ ಧಾರಾಳ ಕಲ್ಲಣಬೆ ಸಿಗುತ್ತಿದ್ದರೂ, ಅದನ್ನು ಹೆಕ್ಕಿ ಶುಚಿಗೊಳಿಸಿ ಪೇಟೆಗೆ ತರುವವರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೂಡಾ ಕಲ್ಲಣಬೆ ದೊರೆಯುವುದು ಅಪರೂಪವಾಗಿದೆ
*ವಿಶೇಷ ವರದಿ: ಸಂಪತ್ ಚರಣ್ ಕಾರ್ಕಳ