ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ Maruti Suzuki ತನ್ನ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಜೂನ್ ತಿಂಗಳಿನಿಂದ ಅನ್ವಯವಾಗುವಂತೆ ಕಂಪನಿಯ ವಿವಿಧ ಕಾರುಗಳ ಬೆಲೆಯಲ್ಲಿ ಗರಿಷ್ಠ ₹30,000 ವರೆಗೆ ಹೆಚ್ಚಳ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ.
ವಾಹನ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ಮುಂಬೈನ ರಾಷ್ಟ್ರೀಯ ಷೇರುಪೇಟೆ (NSE)ಗೆ ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಿದೆ.
ಈ ದರ ಏರಿಕೆ ಎಲ್ಲಾ ಮಾದರಿಗಳಿಗೂ ಒಂದೇ ರೀತಿಯಾಗಿರುವುದಿಲ್ಲ. ಕಾರಿನ ಮಾದರಿ ಹಾಗೂ ವೆರಿಯೆಂಟ್ಗೆ ಅನುಗುಣವಾಗಿ ಬೆಲೆಯಲ್ಲಿ ವ್ಯತ್ಯಾಸ ಇರಲಿದೆ. ಕಂಪನಿಯ ಅರೆನಾ (Arena) ಮತ್ತು ನೆಕ್ಸಾ (Nexa) ಶ್ರೇಣಿಯ ಹಲವು ವಾಹನಗಳ ಎಕ್ಸ್-ಶೋರೂಂ ದರ ಹೆಚ್ಚಳವಾಗಲಿದೆ.
ಮಧ್ಯಮ ವರ್ಗದವರಲ್ಲಿ ಹೆಚ್ಚು ಜನಪ್ರಿಯವಾಗಿರುವ ಆಲ್ಟೊ, ಸ್ವಿಫ್ಟ್, ವ್ಯಾಗನ್ಆರ್, ಬ್ರೆಝಾ ಹಾಗೂ ಪ್ರೀಮಿಯಂ ಎಸ್ಯುವಿಯಾದ ಗ್ರಾಂಡ್ ವಿಟಾರಾ ಸೇರಿದಂತೆ ಬಹುತೇಕ ಎಲ್ಲಾ ಮಾದರಿಗಳ ಬೆಲೆ ದುಬಾರಿಯಾಗಲಿದೆ.
ಈ ಮೊದಲು Tata Motors, Mahindra & Mahindra ಹಾಗೂ Hyundai Motor Company ಕೂಡ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿದ್ದವು. ಇದೀಗ ಮಾರುತಿ ಸುಜುಕಿ ಕೂಡ ಅದೇ ಹಾದಿ ಹಿಡಿದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸ್ಟೀಲ್, ಅಲ್ಯೂಮಿನಿಯಂ ಮತ್ತು ಪ್ಲಾಸ್ಟಿಕ್ನಂತಹ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿರುವುದು ವಾಹನೋದ್ಯಮಕ್ಕೆ ದೊಡ್ಡ ಹೊರೆ ತಂದಿದೆ. ಜೊತೆಗೆ ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದ ಹಡಗು ಸಾಗಣೆ ಹಾಗೂ ಲಾಜಿಸ್ಟಿಕ್ಸ್ ವೆಚ್ಚಗಳು ಕೂಡ ಹೆಚ್ಚಾಗಿವೆ.
ಕಳೆದ ಕೆಲವು ತಿಂಗಳುಗಳಿಂದ ಕಂಪನಿ ತನ್ನ ಆಂತರಿಕ ವೆಚ್ಚ ಕಡಿತ ಕ್ರಮಗಳ ಮೂಲಕ ಈ ಹೆಚ್ಚುವರಿ ಹೊರೆಯನ್ನು ತಾನೇ ಭರಿಸುತ್ತಿತ್ತು. ಆದರೆ ವೆಚ್ಚದ ಒತ್ತಡ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅದರ ಒಂದು ಭಾಗವನ್ನು ಇದೀಗ ಗ್ರಾಹಕರ ಮೇಲೂ ವರ್ಗಾಯಿಸಲಾಗುತ್ತಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

















