ಚಿಕ್ಕಮಗಳೂರು: ವಿವಾಹಿತ ಮಹಿಳೆಯೊಬ್ಬಳು ಪ್ರಿಯಕರನ ಎದುರಿನಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿಹಚ್ಚಿಕೊಂಡು ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದಲ್ಲಿ ನಡೆದಿದೆ.
ಬಿಳಗುಳ ನಿವಾಸಿ ಸವಿತಾ (42) ಆತ್ಮಹತ್ಯೆಗೆ ಶರಣಾದ ಮಹಿಳೆ. ಈಕೆ ವೈಯುಕ್ತಿಕ ಕಾರಣದಿಂದ ಪತಿಯನ್ನು ಬಿಟ್ಟು ತವರು ಮನೆಯ ಬಳಿ ಹೋಂ ಸ್ಟೇ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಆಗ ಅಲ್ಲೇ ಸಮೀಪದ ದುರ್ಗಾ ಪರಮೇಶ್ವರಿ ಎಸ್ಟೇಟ್ನಲ್ಲಿ ರೈಟರ್ ಆಗಿ ಕೆಲಸ ಮಾಡ್ತಿದ್ದ ಕೊಲ್ಲಿಬೈಲ್ ನಿವಾಸಿ ನಂದೀಶ (28) ಎಂಬುವವನ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು.
ಇತ್ತೀಚೆಗೆ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಅದರಂತೆ ಕಳೆದ ಭಾನುವಾರ ಸವಿತಾ ಪೆಟ್ರೋಲ್ ಸುರಿದುಕೊಂಡು ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಆಗ ನಂದೀಶ್ ನಿನ್ನದು ಬರೀ ಇದೆ ಆಯ್ತು, ಹಾಗಿದ್ರೆ ಸಾಯಿ ನೋಡೋಣ, ನಾನೇ ಬೆಂಕಿ ಪೊಟ್ಟಣ ತರ್ತೀನಿ ಅಂತಾ ಹೇಳಿದ್ದನಂತೆ. ಇದರಿಂದ ಸಿಟ್ಟಿಗೆದ್ದ ಸವಿತಾ, ನಂದಿಶ್ ಕೆಲಸ ಮಾಡುತ್ತಿದ್ದ ಎಸ್ಟೇಟ್ ಮುಂಭಾಗದಲ್ಲೇ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಘಟನೆಯಲ್ಲಿ ನಂದೀಶನ ಎರಡು ಕೈಗಳು ಸುಟ್ಟು ಹೋಗಿದ್ದು, ಆತನು ಕೂಡ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಆದರೆ ತೀವ್ರ ಸುಟ್ಟುಹೋಗಿದ್ದ ಸವಿತಾ ಕೊನೆಯುಸಿರೆಳೆದಿದ್ದಾಳೆ. ಸವಿತಾಳ ಮನೆಯವರು ನಂದಿಶನೇ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಸಾಯಿಸಿದ್ದಾನೆ ಎಂದು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.